ನ್ಯೂಸ್

ಬಿಜೆಪಿ-ಕಾಂಗ್ರೆಸ್ ಮತಕಹಳೆ: ಇಂದು-ನಾಳೆ ಅಮಿತ್ ಷಾ-ರಾಹುಲ್ ಗಾಂಧಿ ಕಾರ್ಯಾಚರಣೆ

ಬೆಂಗಳೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ವರ್ಷ ಬಾಕಿ ಇರುವಂತೆ ಮತಕಹಳೆ ಮೊಳಗಿಸಿರುವ ಬಿಜೆಪಿ, ಕಾಂಗ್ರೆಸ್ ವರಿಷ್ಠರು ತಮ್ಮ ಪಕ್ಷಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಒಂದೇ ಸಮಯದಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಕರ್ನಾಟಕದ ಕದನಕಣ ಗುರುವಾರ ಅಧಿಕೃತವಾಗಿ ಚುನಾವಣೆಗೆ ತೆರೆದುಕೊಳ್ಳಲಿದೆ. ಬಿಜೆಪಿಯ ಬಿ.ವೈ.ವಿಜಯೇಂದ್ರ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರ ಜಯಂತಿಯ ನೇತೃತ್ವ ವಹಿಸಿರುವುದು ಗಮನ ಸೆಳೆದಿದೆ. ಇದೇ ಸಂದರ್ಭ ದಲ್ಲಿ ಗೃಹ ಸಚಿವ ಅಮಿತ್ ಷಾ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಾಹ್ನ ಬಂದಿಳಿಯುತ್ತಿರುವುದು ವಿಶೇಷ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ, ಸರ್ಕಾರದಿಂದ ಆಗಬೇಕಾದ ತೀರ್ವನಗಳನ್ನು ಷಾ ಮುಂದಿಡಲು ರಾಜ್ಯ ನಾಯಕರು ಸಿದ್ಧತೆ ನಡೆಸಿದ್ದಾರೆ.

ಕೋರ್​ಕಮಿಟಿ ಸಭೆಗೆ ನಿರ್ದಿಷ್ಟ ವಿಷಯಗಳನ್ನು ಇಟ್ಟುಕೊಂಡಿಲ್ಲ. ಅಮಿತ್ ಷಾ ಅಣತಿಯಂತೆ ಸಭೆ ನಡೆಯುವುದು. ಸಭೆಯಲ್ಲಿ ಚುನಾವಣೆ ವಾತಾವರಣ, ಚುನಾವಣೆ ಮೇಲೆ ಪರಿಣಾಮ ಬೀರುವ ಅಂಶಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸದ್ಯಕ್ಕೆ ಬಿ.ಎಸ್.ಯಡಿಯೂರಪ್ಪ ಜತೆಗೆ ಅಮಿತ್ ಷಾ ಮುಖಾಮುಖಿ ಸಭೆ ನಡೆಸುವರೆಂದು ಹೇಳಲಾಗುತ್ತಿದೆ, ಇದನ್ನು ಹೊರತುಪಡಿಸಿ ಅನೌಪಚಾರಿಕ ಸಭೆ ಬಗ್ಗೆ ಸ್ಪಷ್ಟತೆಗಳಿಲ್ಲ.

ಅಮಿತ್ ಷಾ ಕಾರ್ಯಕ್ರಮ

  • ಗೃಹ ಸಚಿವ ಅಮಿತ್ ಷಾ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮನ, ತಡರಾತ್ರಿ ಪ್ರಮುಖ ನಾಯಕರ ಸಭೆ
  • ಶುಕ್ರವಾರ ಬೆಳಗ್ಗೆ ತುಮಕೂರು, ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ
  • ಎರಡೂ ಕಾರ್ಯಕ್ರಮಗಳ ಬಳಿಕ ಬೆಂಗಳೂರಿಗೆ ಆಗಮಿಸಿ ಸಹಕಾರ ಇಲಾಖೆ ಸಮಾರಂಭಕ್ಕೆ ಹಾಜರು
  • ರಾತ್ರಿ ಪಕ್ಷದ ಕಚೇರಿಯಲ್ಲಿ ಕರೆದಿರುವ ಕೋರ್ ಕಮಿಟಿ ಸಭೆ ಮುನ್ನಡೆಸಲಿದ್ದಾರೆ

ರಾಹುಲ್ ದಿನಚರಿ

  • ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮನ. 12.40ರಿಂದ 2 ಗಂಟೆವರೆಗೆ ವಿಮಾನ ನಿಲ್ದಾಣದ ತಾಜ್ ಹೋಟೆಲ್​ನಲ್ಲಿ ವಿಶ್ರಾಂತಿ ಪಡೆದು ಬಳಿಕ ತುಮಕೂರಿಗೆ ಪ್ರಯಾಣ. ಸಂಜೆ 7ಕ್ಕೆ ಬೆಂಗಳೂರಿಗೆ ಹಿಂದಿರುಗಿ ಬಿಬಿಎಂಪಿ ಚುನಾವಣೆ ಸಂಬಂಧ ಪ್ರಮುಖ ನಾಯಕರು, ಬೆಂಗಳೂರು ಶಾಸಕರೊಂದಿಗೆ ಸಮಾಲೋಚನೆ
  • ಏ.1ರಂದು ಬೆಳಗ್ಗೆ 11 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿ, ಮಧ್ಯಾಹ್ನ 2ರಿಂದ 3.20ರವರೆಗೆ ಮುಂಚೂಣಿ ಘಟಕದೊಂದಿಗೆ ಸಮಾಲೋಚನೆ, ಪ್ರತ್ಯೇಕವಾಗಿ ವಿವಿಧ ಘಟಕಗಳ ಜವಾಬ್ದಾರಿ ವಿವರಣೆ
  • 3.30ಕ್ಕೆ ದೆಹಲಿಗೆ ಪ್ರಯಾಣ. ಇದನ್ನು ಹೊರತುಪಡಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರ ಜತೆ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ.

ಕಾಂಗ್ರೆಸ್ ತಯಾರಿ: ಬಿಜೆಪಿ, ಸರ್ಕಾರದ ವಿರುದ್ಧ ಮೇಕೆದಾಟು ಪಾದಯಾತ್ರೆ ಸೇರಿ ಇತ್ತೀಚಿನ ಹೋರಾಟದ ವರದಿಯನ್ನು ಕೆಪಿಸಿಸಿ ಸಿದ್ಧಪಡಿಸಿಕೊಂಡಿದ್ದು ರಾಹುಲ್ ಮುಂದಿಡಲಾಗುತ್ತದೆ. ಇದನ್ನು ಹೊರತು ಪಡಿಸಿ ಸದಸ್ಯತ್ವ ಅಭಿಯಾನದ ವರದಿ, ಮುಂಬರುವ ಚುನಾವಣೆಯ ಪೂರ್ವ ತಯಾರಿ, ಪಕ್ಷಾಂತರ ಮಾಡುವವರ ಬಗ್ಗೆ, ಮುಂದೆ ಕೈಗೊಳ್ಳಲಾಗುವ ಹೋರಾಟದ ಬಗ್ಗೆ ಯೋಜನೆಯನ್ನು ರಾಹುಲ್ ಗಮನಕ್ಕೆ ತರಲಾಗುತ್ತದೆ.