ನ್ಯೂಸ್

ಬಿ.ಎಸ್.ಯಡಿಯೂರಪ್ಪ ಸಮರ್ಥರು, ಕೊಟ್ಟ ಮಾತು ಉಳಿಸಿಕೊಂಡ ಏಕೈಕ ನಾಯಕ ಎಂದು ಹೊಗಳಿದ ನಳೀನ್​ಕುಮಾರ್ ಕಟೀಲ್​

ಬಳ್ಳಾರಿ: ಕಾಂಗ್ರೆಸ್​ನವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಅವರಿಗೆ ಕಳೆದ ಆರು ತಿಂಗಳಲ್ಲಿ ಓರ್ವ ಅಧ್ಯಕ್ಷನನ್ನು ನೇಮಕ ಮಾಡಲು ಆಗಲಿಲ್ಲ. ಅವರೇನು ನಮ್ಮ ಮಂತ್ರಿ ಮಂಡಲದ ರಚನೆ ಬಗ್ಗೆ ಮಾತನಾಡುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್​ ಹೇಳಿದ್ದಾರೆ.

ನಮ್ಮ ಯಡಿಯೂರಪ್ಪ ಸಮರ್ಥ ನಾಯಕರಿದ್ದಾರೆ. ಅವರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡರು. ಈ ರಾಜ್ಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ಏಕೈಕ ನಾಯಕ ಎಂದರೆ ಅದು ಯಡಿಯೂರಪ್ಪ. ಸರ್ಕಾರ ಭದ್ರವಾಗಲು ಸಹಾಯ ಮಾಡಿದ 10 ಜನರನ್ನೂ ಮಂತ್ರಿ ಮಾಡಿದ್ದಾರೆ ಎಂದು ಕಟೀಲ್​ ಹೊಗಳಿದರು.

400 ಸ್ಥಾನದಲ್ಲಿದ್ದ ಕಾಂಗ್ರೆಸ್ ಈಗ 40 ಸ್ಥಾನಕ್ಕೆ ಇಳಿದಿದೆ. ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ನಾಲಾಯಕ್​ ಆಗಿದೆ. ಕಾಂಗ್ರೆಸ್ ಸಂಘಟನೆಯಲ್ಲೂ ವಿಫಲವಾಗಿದೆ ಎಂದು ಹೇಳಿದರು.

ದೇಶದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಒಬ್ಬರ ಮೇಲೆ ಕೂಡ ಭ್ರಷ್ಟಾಚಾರ ಆರೋಪ ಬಂದಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಕಾಶ್ಮೀರದ ಯಾವುದೇ ಹಳ್ಳಿಯಲ್ಲೂ ಬಾಂಬ್ ಸ್ಫೋಟವಾಗಿಲ್ಲ. ರಾಮಮಂದಿರದಂತಹ ಜಟಿಲ ಸಮಸ್ಯೆಗೇ ಪರಿಹಾರ ಸಿಕ್ಕಿದೆ ಎಂದು ತಿಳಿಸಿದರು.(ದಿಗ್ವಿಜಯ ನ್ಯೂಸ್​)