ಬೆಂಗಳೂರು: ಆಡಳಿತಾರೂಢ ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಹಾನಗಲ್-ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಭಾನುವಾರ ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಧಾನ ಕಾರ್ಯಸೂಚಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಸಭೆಗೆ ಹಾಜರಾಗಲೆಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಜಯನಗರ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 1ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ.
ಅಧಿಕಾರದಲ್ಲಿರುವ ಪಕ್ಷಕ್ಕೆ ಉಪ ಚುನಾವಣೆಗಳಲ್ಲಿ ಗೆಲ್ಲುವ ಅವಕಾಶಗಳು ಜಾಸ್ತಿ. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ನಡೆದ ಸರಣಿ ಚುನಾವಣೆಗಳಲ್ಲಿ ಮೇಲುಗೈ ಇದಕ್ಕೆ ನಿದರ್ಶನ. ಹೀಗಾಗಿ ಪಕ್ಷದ ಟಿಕೆಟ್ಗೆ ಪೈಪೋಟಿ ಹೆಚ್ಚಿರುವುದು ಸಹಜ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು, ಸಂಘಟನಾ ಬಲವೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದಕ್ಕೆ ನಿದರ್ಶನ ಎಂದು ಮುಂಚೂಣಿ ನಾಯಕರು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ ಟಿಕೆಟ್ಗೆ ಆಕಾಂಕ್ಷಿಗಳ ನಡುವಿನ ಪೈಪೋಟಿ ನಿಭಾಯಿಸುವುದು ಪಕ್ಷಕ್ಕೆ ದೊಡ್ಡ ಸವಾಲಾಗಿದೆ.
ಹಾನಗಲ್ನಲ್ಲಿ ಸಂಸದ ಶಿವಕುಮಾರ್ ಉದಾಸಿ ತಮಗೆ ಅಥವಾ ಪತ್ನಿ ರೇವತಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರೆ, ಯು.ಬಿ.ಬಣಕಾರ್, ಕಲ್ಯಾಣಶೆಟ್ಟರ್, ಶಿವರಾಜ ಸಜ್ಜನ್, ರಾಜಶೇಖರಗೌಡ ಕಟ್ಟೇಗೌಡರ್ ಜತೆಗೆ ಇನ್ನೂ ಕೆಲ ಪ್ರಬಲ ಆಕಾಂಕ್ಷಿಗಳಿದ್ದಾರೆ. ಸಿಂದಗಿಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರು ಅವರಿಗೆ ಶಿವಾನಂದ ಪಾಟೀಲ್ ಸೋಮಜಾಳ, ಅಶೋಕ್ ಅಲ್ಲಾಪುರ, ಶಂಭು ಕಕ್ಕಳಮೇಲಿ ಅಡ್ಡಗಾಲು ಹಾಕಿದ್ದರೆ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್ ಕಣ್ಣಿಟ್ಟಿದ್ದಾರೆ. ಈ ಮಧ್ಯೆ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ಹೆಸರು ತೇಲಿಬಿಡಲಾಗಿದೆ.
ಉಸ್ತುವಾರಿಗಳ ನೇಮಕ: ಉಪಸಮರ ಎದುರಿಸಲು ರೂಪಿಸಿದ ಕಾರ್ಯತಂತ್ರ ಪರಿಣಾಮಕಾರಿ ಅನುಷ್ಠಾನ ಹಾಗೂ ನಿರೀಕ್ಷಿತ ಫಲ ಪಡೆಯುವ ನಿಟ್ಟಿನಲ್ಲಿ ಎರಡೂ ಕ್ಷೇತ್ರಗಳಿಗೆ ಸಚಿವರು-ಶಾಸಕರು, ಪಕ್ಷದ ಪ್ರಭಾರಿಗಳನ್ನು ಸೇರಿಸಿ ಉಸ್ತುವಾರಿ ತಂಡಗಳನ್ನು ನೇಮಿಸುವ ಸಾಧ್ಯತೆಗಳಿವೆ. ವಿಧಾನಪರಿಷತ್ ನಗರ-ಪಟ್ಟಣ, ಗ್ರಾಮೀಣ ಸಂಸ್ಥೆಗಳ ಕ್ಷೇತ್ರಗಳ ಚುನಾವಣೆಪೂರ್ವ ತಯಾರಿ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ. ಜನವರಿ ಮೊದಲ ವಾರ 25 ಕ್ಷೇತ್ರಗಳ ಸದಸ್ಯರ ಅವಧಿ ಮುಗಿಯಲಿದೆ. ಅದಕ್ಕೂ ಮುಂಚೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗುವ ಅಂದಾಜಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದು, ಚರ್ಚೆಯಾಗದಿದ್ದರೆ ಔಪಚಾರಿಕ ಮಾಹಿತಿ ವಿನಿಮಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಉಪ ಚುನಾವಣೆ ಗೆಲ್ಲಲು ಬಿಜೆಪಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಎರಡರಲ್ಲೂ ದೊಡ್ಡ ಅಂತರ ದಿಂದ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಭಾನುವಾರ ನಡೆಯುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ 2 ವಿಧಾನಸಭಾ ಉಪ ಚುನಾವಣೆಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪಾರ್ಲಿಮೆಂಟರಿ ಬೋರ್ಡ್ಗೆ ಕಳಿಸಲಾಗುವುದು. ಎರಡೂ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ. | ಸಿ.ಟಿ.ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ವಿಧಾನಪರಿಷತ್ನ ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್ ಅವಧಿ ಮುಗಿಯುವ ಹಂತದಲ್ಲಿ ಆ ಪಕ್ಷ ತೊರೆದು, ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಇದರಿಂದಾಗಿ ಕಮಲ ಪಡೆಗೆ ಹಲವು ‘ಸಂದೇಶ’ ರವಾನೆಯಾದ ಕುರಿತು ಆಂತರಿಕ ಚರ್ಚೆಗೆ ಗ್ರಾಸವಾಗಿದೆ. ಸಂದೇಶ್ ನಾಗರಾಜ್ಗೆ ಚುನಾವಣೆ ಬರುವ ಹೊತ್ತಿಗೆ 77ರ ವಯೋಮಿತಿ ತಲುಪಲಿದ್ದು, ಪಕ್ಷ ತಾನೇ ವಿಧಿಸಿಕೊಂಡ ಅಘೋಷಿತ ನಿಯಮ ಮುರಿದು ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವುದೇ? ಎಂಬುದು ಚರ್ಚೆಯ ಮೊದಲ ಅಂಶ. ಅಲ್ಲದೆ, ಸಂದೇಶ್ ಸೋದರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರೆ, ಸಹೋದರನ ಪುತ್ರ ಮೈಸೂರು ಮಹಾನಗರ ಪಾಲಿಕೆಯ ಹಾಲಿ ಸದಸ್ಯ. ಇದೀಗ ಮತ್ತೆ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿಯೇ ಸಂದೇಶ್ ನಾಗರಾಜ್ ಬಿಜೆಪಿ ಕದತಟ್ಟುತ್ತಿದ್ದು, ಅವರಿಗೆ ಮಣೆ ಹಾಕಿದರೆ ಕುಟುಂಬ ರಾಜಕಾರಣವನ್ನು ಪಕ್ಷವೇ ಪೋಷಿಸಿದಂತಾಗುತ್ತದೆ ಎಂಬ ಮತ್ತೊಂದು ಅಂಶವು ಪಕ್ಷದೊಳಗೆ ಚರ್ಚೆ ಹುಟ್ಟಿ ಹಾಕಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಸಂದೇಶ್ ನಾಗರಾಜ್ ಅಪೇಕ್ಷೆ ಕುರಿತು ಭಾನುವಾರ ನಡೆಯಲಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಲಿದೆಯೇ? ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವ ಕುತೂಹಲ ಕಾರ್ಯಕರ್ತರಲ್ಲಿ ಹೆಚ್ಚಿದೆ.