ಬೆಂಗಳೂರು: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಶಿಗ್ಗಾವಿ ಮತ್ತು ಸಂಡೂರು (ಎಸ್‌ಟಿ ಮೀಸಲು) ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ೋಷಿಸಿದ ಬಿಜೆಪಿ, ಚನ್ನಪಟ್ಟಣ ಕ್ಷೇತ್ರವನ್ನು ಮಿತ್ರಪಕ್ಷ ಜೆಡಿಎಸ್ ವಿವೇಚನೆಗೆ ಬಿಟ್ಟಿದೆ.
ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದ್ದ ಬಿಜೆಪಿ ವರಿಷ್ಠರು, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಮಣೆ ಹಾಕಿದ್ದಾರೆ.
ಹಾಗೆಯೇ ಸಂಡೂರು ಕ್ಷೇತ್ರ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಬಂಗಾರು ಹನುಮಂತುಗೆ ಮನ್ನಣೆ ನೀಡಿದ್ದು, ವರಿಷ್ಠರ ನಡೆಯು ಪಕ್ಷದ ರಾಜ್ಯ ನಾಯಕರನ್ನು ಅಚ್ಚರಿಗೀಡು ಮಾಡಿದೆ.
ಪಕ್ಷದ ರಾಜ್ಯ ಕೋರ್ ಕಮಿಟಿ ಇಷ್ಟರಲ್ಲೇ ಸಭೆ ಸೇರಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಕಳುಹಿಸುತ್ತೇವೆ ಎಂದಿದ್ದ ಬೊಮ್ಮಾಯಿ, ಜೆ.ಪಿ.ನಡ್ಡಾ ಬರ ಹೇಳಿದ್ದಾರೆ.
ಶಿಗ್ಗಾವಿ ಸೇರಿ ಮೂರು ಕ್ಷೇತ್ರಗಳ ಬಗ್ಗೆ ಚರ್ಚಿಸುವೆ. ವೈಯಕ್ತಿಕ ಕಾರಣದಿಂದ ನನ್ನ ಮಗ ಭರತ್ ಬೊಮ್ಮಾಯಿಗೆ ಟಿಕೆಟ್ ಬೇಡವೆಂದಿದ್ದೇನೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ ಸ್ವಲ್ಪ ಹೊತ್ತಿನಲ್ಲೇ ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ.
ಶಿಗ್ಗಾವಿಗೆ ಭರತ್ ಬೊಮ್ಮಾಯಿ ಸೇರಿ 57 ಜನರು ಟಿಕೆಟ್ ಬಯಸಿ ಅರ್ಜಿ ಹಾಕಿದ್ದರು. ಆದರೆ ಮಾಜಿ ಸಿಎಂ ಬೊಮ್ಮಾಯಿ ಒಲವನ್ನೇ ಉಮೇದುವಾರಿಕೆ ಭವಿಷ್ಯ ಅವಲಂಬಿಸಿದೆ ಎಂದು ಆಕಾಂಕ್ಷಿಗಳು ಬಲ್ಲವರಾಗಿದ್ದರು.
ಚನ್ನಪಟ್ಟಣ ಕ್ಷೇತ್ರಕ್ಕೆ ಯಾವುದೇ ಹೆಸರು ಪ್ರಕಟಿಸದ ಬಿಜೆಪಿ ವರಿಷ್ಠರು ಮೈತ್ರಿಧರ್ಮ ಪಾಲನೆಯ ಸ್ಪಷ್ಟ ಸಂದೇಶವನ್ನು ಸ್ವಪಕ್ಷದ ರಾಜ್ಯ ನಾಯಕರಿಗೆ ರವಾನಿಸಿದ್ದಾರೆ.
ಯೋಗೇಶ್ವರ್ ಪರವಾಗಿ ಪಕ್ಷದ ಬಹುತೇಕ ರಾಜ್ಯ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಿರ್ಣಾಯಕರಾಗಿದ್ದು, ಈ ಕ್ಷೇತ್ರದಲ್ಲಿ ಗೆಲ್ಲುವುದೂ ಸಹಿತ ಪ್ರತಿಷ್ಠೆ ವಿಷಯವಾಗಿದೆ.
ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಡಬೇಕೆಂಬ ಒತ್ತಾಯದ ಬಗ್ಗೆ ಕುಮಾರಸ್ವಾಮಿ ಏನನ್ನೂ ಹೇಳಿಲ್ಲ. ಬಿಜೆಪಿ ವರಿಷ್ಠರು, ರಾಜ್ಯ ನಾಯಕರೊಂದಿಗೆ ಚರ್ಚಿಸುವೆ ಎನ್ನುತ್ತಾ ಕಾಲತಳ್ಳುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ವರಿಷ್ಠರು ಎರಡು ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಕಣಕ್ಕಿಳಿಸಿ, ಚನ್ನಪಟ್ಟಣದ ನಿರ್ಧಾರ ನಿಮಗೆ ಬಿಟ್ಟದ್ದೆಂದು ದಳಪತಿಗಳಿಗೆ ಸ್ಪಷ್ಟಪಡಿಸಿಯಾಗಿದೆ.
ಇನ್ನೇನಿದ್ದರೂ ಉಭಯ ಪಕ್ಷಗಳ ರಾಜ್ಯಗಳ ಚರ್ಚೆಗೆ ಬಿಟ್ಟಂತಾಗಿದೆ. ಕುಮಾರಸ್ವಾಮಿ ಕ್ಷೇತ್ರವನ್ನು ಬಿಟ್ಟುಕೊಡುವ ‘ದೊಡ್ಡ ಮನಸ್ಸು’ ಮಾಡಿದರಷ್ಟೇ ಯೋಗೇಶ್ವರ್ ಸ್ಪರ್ಧೆಯ ವಿಚಾರ ಮಾತುಕತೆಗೆ ಬರಬಹುದು ಎಂದು ಹೇಳಲಾಗುತ್ತಿದೆ.
ಹಿಂದಿನ ಎರಡು ಚುನಾವಣೆಗಳಂತೆ ಈ ಬಾರಿ ಉಪಚುನಾವಣೆಗೂ ಬಂಗಾರು ಹನುಮಂತು ಟಿಕೆಟ್ ಆಕಾಂಕ್ಷಿಯಾಗಿದ್ದರು. ಜತೆಗೆ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನದ ಬಲ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಗಾಲಿ ಜನಾರ್ದನರೆಡ್ಡಿ ಬೆಂಬಲವೂ ಇತ್ತು ಎನ್ನಲಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕೂಡ್ಲಿಗಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಸ್ಪರ್ಧಿಸಿ ಸೋತಿದ್ದರು. 2023ರ ಚುನಾವಣೆಗೂ ಮತ್ತೆ ಕೂಡ್ಲಿಗಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಸಿಗದ ಕಾರಣ ಪಕ್ಷಕ್ಕೆ ನಿಷ್ಠರಾಗಿ ಉಳಿದರು.
ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಪಕ್ಷದಲ್ಲಿ ಬಡ್ತಿ ಪಡೆಯುವ ಜತೆಗೆ ಸಂಡೂರು ಕ್ಷೇತ್ರದ ಉಪ ಚುನಾವಣೆಗೆ ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡು, ದಶಕದ ಆಸೆ ಈಡೇರಿಸಿಕೊಂಡಿದ್ದಾರೆ.