ನ್ಯೂಸ್

ಚುನಾವಣೆಗೆ ಕ್ರಿಯಾಶೀಲ ತಂಡ ಕಟ್ಟಲಿದೆ ಬಿಜೆಪಿ

ಬೆಂಗಳೂರು: ಕಾರ್ಯಕರ್ತರಲ್ಲಿ ಹುರುಪು, ಸಂಘಟನೆ ಬಲವರ್ಧನೆ ಕಾರ್ಯಯೋಜನೆ ಜಾರಿಯೊಂದಿಗೆ ಪ್ರತಿ ಬೂತ್ ಹಂತದಲ್ಲಿ ಕ್ರಿಯಾಶೀಲ ತಂಡ ಕಟ್ಟುವತ್ತ ಬಿಜೆಪಿ ಚಿತ್ತ ನೆಟ್ಟಿದೆ. ಪ್ರತಿ ಹಂತದ ಕಾರ್ಯಕರ್ತರು, ಮುಖಂಡರನ್ನು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿ, 2023ರ ವಿಧಾನಸಭೆ ಚುನಾವಣೆಗೆ ದಣಿವರಿಯದೆ ದುಡಿಯುವುದಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಬೂತ್ ಹಂತದಿಂದ ಜಿಲ್ಲಾಮಟ್ಟದವರೆಗೆ ಹಲವು ಕಾರ್ಯಕ್ರಮ, ಸಭೆಗಳು, ಅನುಷ್ಠಾನದ ಚರ್ಚೆ, ಮೇಲ್ವಿಚಾರಣೆ, ಹಿಮ್ಮಾಹಿತಿ ಪಡೆಯುವುದಕ್ಕೂ ಒತ್ತು ನೀಡಿದೆ. 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮಿಷನ್ 150 ಗುರಿ ಸಾಧಿಸುವ ನಿಟ್ಟಿನಲ್ಲಿ ಹೆಣೆದ ಕಾರ್ಯತಂತ್ರಗಳನ್ನು ಚಾಚೂತಪ್ಪದೆ ಜಾರಿಗೆ ಒತ್ತು ನೀಡಿದೆ.

ಜವಾಬ್ದಾರಿ ಹಂಚಿಕೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ 119 ಕ್ಷೇತ್ರಗಳಲ್ಲಿ ಸೋತವರಿಗೆ ತಲಾ 30 ಬೂತ್​ಗಳನ್ನು ಹಂಚುವ ಮೂಲಕ ಪಕ್ಷಕ್ಕೆ ಶೇ.50 ಮತಗಳನ್ನು ಗಟ್ಟಿಗೊಳಿಸುವ ಜವಾಬ್ದಾರಿ ನೀಡಿದೆ. ಅಲ್ಲದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಜಿತರು ಹಾಗೂ ವಿಧಾನ ಪರಿಷತ್ ಸದಸ್ಯರಿಗೂ ಇದೇ ಪ್ರಮಾಣದ ಬೂತ್​ಗಳ ಹೊಣೆಗಾರಿಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರ ಪಂಚ ಸಂಕಲ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಂಚ ಯೋಜನೆಗಳ ಲಾಭ ಜನರಿಗೆ ತಲುಪಿಸುವ ಟಾಸ್ಕ್ ಕಾರ್ಯಕರ್ತರಿಗೆ ನೀಡಲಾಗಿದೆ. ಕಾರ್ಯಕರ್ತರು ತಮಗೊಪ್ಪಿಸಿದ ಟಾಸ್ಕ್ ನಿಭಾವಣೆ ಮೇಲೆ ಪರಾಜಿತರು ನಿಗಾವಹಿಸಿ, ನಿಕಟತೆ ಸಾಧಿಸಬೇಕೆಂದು ರಾಜ್ಯ ನಾಯಕರು ಸೂಚಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ, ಯೋಜನೆಗಳ ವ್ಯಾಪಕ ಪ್ರಚಾರ ಮತ್ತು ಅರ್ಹರಿಗೆ ಈ ಕುರಿತು ಮಾಹಿತಿ ನೀಡಿ, ಪ್ರಯೋಜನ ಪಡೆಯುವುದಕ್ಕೆ ನೆರವಾಗಬೇಕೆಂಬ ಸಲಹೆ ನೀಡಲಾಗಿದೆ.

ವೈಫಲ್ಯದ ಬಗ್ಗೆ ಜನ ಜಾಗೃತಿ: ಅಭಿವೃದ್ಧಿ ಮತ್ತು ಅನುದಾನ ಹಂಚಿಕೆ ಬಗ್ಗೆ ಗಮನವಿಡದೆ ಪ್ರತಿಪಕ್ಷಗಳ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಯೋಜನೆಗಳ ಅನುಷ್ಠಾನ, ಕಾರ್ಯವೈಖರಿ ಪರಾಮಶಿಸಬೇಕು. ವೈಫಲ್ಯದ ವಿರುದ್ಧ ಜನಜಾಗೃತಿಗೊಳಿಸಿ, ಒಂದಿಲ್ಲೊಂದು ಹೋರಾಟ ಹಮ್ಮಿಕೊಂಡು ಒತ್ತಡ ಹೇರಿ ಸರ್ಕಾರದ ಕಾರ್ಯಕ್ರಮ ಫಲ ಜನರಿಗೆ ತಲುಪಿಸಿದ ಶ್ರೇಯಸ್ಸು ಗಳಿಸಬಹುದು.

ಬೂತ್​ವುಟ್ಟದಲ್ಲಿ ಸಭೆಗಳು, ಪಕ್ಕದ ಬೂತ್ ಚಟುವಟಿಕೆಗಳ ಮಾಹಿತಿ ವಿನಿಮಯ, ಜನರೊಂದಿಗೆ ಸಂವಾದ, ಪರಿಣತರ ಅಭಿಪ್ರಾಯ ಸಂಗ್ರಹ ಇತ್ಯಾದಿ ಕೆಲಸಗಳನ್ನು ಮಾಡಲು ಸಾಧ್ಯವಿದೆ. ಈ ರೀತಿ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡರೆ ದೊಡ್ಡಮಟ್ಟದ ಸಮಾವೇಶಗಳಿಗೆ ಜನರ ಸ್ಪಂದನೆ ದೊರೆಯಲಿದ್ದು, ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಸೇರಿ ರಾಜ್ಯ ನಾಯಕರ ತಂಡಗಳ ಪ್ರವಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು ಎಂಬ ಸಂದೇಶ ನೀಡಲಾಗಿದೆ ಎಂದು ಪಕ್ಷದ ಮೂಲಗಳು ವಿವರಿಸಿವೆ.