ನ್ಯೂಸ್

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ: ಸಚಿವ ತ್ರಯರ ತಲೆದಂಡಕ್ಕೆ ಆಗ್ರಹ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಧನದಾಹಕ್ಕೆ ಮತ್ತೊಬ್ಬ ಅಧಿಕಾರಿ ಬಲಿಯಾಗಿದ್ದಾರೆ. ಭ್ರಷ್ಟಾಚಾರ, ಲಂಚದ ಕಿರುಕುಳ ಮೇರೆ ಮೀರಿದೆ. 17 ತಿಂಗಳಲ್ಲಿ ನಾಲ್ಕನೇ ಪ್ರಕರಣವಿದು ಎಂದು ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಬೆಳಗಾವಿ ತಹಸೀಲ್ ಕಚೇರಿಯ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್‌ನೋಟ್‌ನಲ್ಲಿ ಪ್ರಸ್ತಾಪಿಸಿರುವ ಅಂಶಗಳು ಅನುಮಾನಗಳಿಗೆ ಎಡೆಮಾಡಿದೆ. ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನ ಹೆಸರು ಪ್ರಸ್ತಾಪಿಸಿದ್ದರತ್ತಲೂ ಬಿಜೆಪಿ ಬೊಟ್ಟು ಮಾಡಿದೆ.

ಸಿದ್ದರಾಮಯ್ಯ ಸಿಎಂ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಭಾಗ್ಯ, ಆತ್ಮಹತ್ಯೆ ಗ್ಯಾರಂಟಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಇನ್ನೆಷ್ಟು ಅಧಿಕಾರಿಗಳ ಬಲಿ ಬೇಕು ?

ಭ್ರಷ್ಟಾಚಾರ, ಲಂಚದ ಕಿರುಕುಳ, ವರ್ಗಾವಣೆ ದಂಧೆಗೆ ಬೇಸತ್ತು ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್, ಯಾದಗಿರಿ ಪಿಎಸ್‌ಐ ಪರಶುರಾಮ್, ದಾವಣಗೆರೆಯ ಗುತ್ತಿಗೆದಾರ ಪಿ.ಸಿ.ಗೌಡರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ದಾಹಕ್ಕೆ ಇನ್ನೆಷ್ಟು ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗಬೇಕು ? ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದು, ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವರ್ಗಾವಣೆ ದಂಧೆಯೇ ಕಾರಣವೆಂಬ ಅನುಮಾನವಿದೆ.

ಕೂಡಲೇ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಂಪುಟದಿಂದ ವಜಾ ಮಾಡಿ, ಪ್ರಕರಣವನ್ನು ಸಿಬಿಐ ತನಿಖೆಗೆವಹಿಸಬೇಕು ಎಂದು ಆರ್.ಅಶೊಕ್ ಆಗ್ರಹಿಸಿದ್ದಾರೆ.

ಸಚಿವತ್ರಯರ ತಲೆದಂಡಕ್ಕೆ ಆಗ್ರಹ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಶರಣಾಗಿದ್ದಾರೆ. ವರ್ಗಾವಣೆ ದಂಧೆಯು ಬಲಿ ತೆಗೆದುಕೊಂಡಿದ್ದು, ತಕ್ಷಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಸಂಪುಟದಿಂದ ವಜಾಗೊಳಿಸಬೇಕು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.

ಮಂಥ್ಲಿ ಮಾಮೂಲು ನಿಗದಿ ಮಾಡಿ ಅಬಕಾರಿ ಇಲಾಖೆಯಲ್ಲಿ ಲೂಟಿಗೆ ಇಳಿದಿರುವ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಸಾವಿರಾರು ಎಕರೆ ಜಮೀನಿನಲ್ಲಿ ವಕ್ಫ್ ಆಸ್ತಿ ಎಂದು ಪಹಣಿ ಪತ್ರದಲ್ಲಿ ನಮೂದಿಸಿ ರೈತರಿಗೆ ನೋಟಿಸ್ ನೀಡುವ ಜತೆಗೆ ಕಿರುಕುಳ ನೀಡಲು ಕಾರಣರಾದ ಜಮೀರ್ ಅಹ್ಮದ್ ತಲೆದಂಡಕ್ಕೂ ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅಕ್ರಮಗಳಿಗೆ ಲಂಗು ಲಗಾಮಿಲ್ಲದಂತಾಗಿದೆ. ಅಭಿವೃದ್ಧಿ, ಹೊಣೆ ಎರಡನ್ನೂ ಮರೆತ ಬಹುತೇಕ ಸಚಿವರು ಬಾಚಿಕೊಳ್ಳಲು ಮುಂದಾದಂತಿದೆ. ಆರ್.ಬಿ.ತಿಮ್ಮಾಪುರ ವಸೂಲಿ ಪರಿಯನ್ನು ಮದ್ಯದ ವ್ಯಾಪಾರಿಗಳು ಬಹಿರಂಗಪಡಿಸಿದ್ದರೆ, ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆಗೆ ಶರಣಾಗಿರುವುದು ವರ್ಗಾವಣೆ ದಂಧೆಗೆ ಕೈಗನ್ನಡಿಯಾಗಿದೆ.

ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ

ಅನ್ನದಾತರು ಸಾವಿರಾರು ಎಕರೆ ಜಮೀನು ಕಬಳಿಸಲು ಹುನ್ನಾರ ಹೂಡಿ, ರೈತರಿಗೆ ನೋಟಿಸ್ ನೀಡಲಾಗಿದ್ದು, ಸಚಿವ ಜಮೀರ್ ಅಹ್ಮದ್ ಒತ್ತಡವೇ ಕಾರಣ. ನೋಟಿಸ್ ವಾಪಸ್ಸು ಪಡೆದು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು. ಹೊಣೆಗಾರರಾದ ಸಚಿವ, ಅಧಿಕಾರಿಗಳ ವಿರುದ್ಧವೂ ಕ್ರಮವಾಗಬೇಕಾಗುತ್ತದೆ.

ವಾಲ್ಮೀಕಿ ನಿಗಮದ ಹಗರಣ, ಮುಡಾ ಅಕ್ರಮ, ವಕ್ಫ್ ಅವಾಂತರ ಎಲ್ಲದಕ್ಕೂ ಅಧಿಕಾರಿಗಳತ್ತ ಬೊಟ್ಟು ಮಾಡುವ ಸರ್ಕಾರ, ಸಚಿವರನ್ನು ಸಾಚಾ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸಾಲು ಸಾಲು ಅಧಿಕಾರಿಗಳನ್ನು ನಿರಂತರವಾಗಿ ಬಲಿ ಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ದಾಹ ತೀರಿದಂತೆ ಕಾಣುತ್ತಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಿ ಮೃತ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ರಾಜ್ಯ ಬಿಜೆಪಿ ಸಾಮಾಜಿಕ ಜಾಲ ತಾಣದ ತನ್ನ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದೆ.