ನ್ಯೂಸ್

ಸ್ಪೀಕರ್ ಮಾರ್ಗದರ್ಶನ ಮಾಡಲು ರಾಜ್ಯಪಾಲರಿಗೆ ಬಿಜೆಪಿ ಮನವಿ | Behaving like a puppet of the ruling party

ಬೆಂಗಳೂರು: ವಿಧಾನಸಭೆಯಿಂದ ಪಕ್ಷದ 18 ಶಾಸಕರನ್ನು ಆರು ತಿಂಗಳು ಕಾಲ ಅಮಾನತು ಮಾಡಿದ್ದಲ್ಲದೆ ಕಠಿಣ ನಿರ್ಬಂಧ ವಿಧಿಸಿರುವುದು ಸಂವಿಧಾನಬಾಹಿರ ಕ್ರಮವಾಗಿದೆ. ಆಡಳಿತ ಪಕ್ಷದ ಕೈಗೊಂಬೆಯಂತೆ ವಿಧಾನಸಭೆ ಸ್ಪೀಕರ್ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ದೂರಿದೆ.

ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗ ಸೋಮವಾರ ಭೇಟಿ ಮಾಡಿ ಈ ಕುರಿತು ಚರ್ಚಿಸಿ, ಮನವಿ ಸಲ್ಲಿಸಿತು.

ಕಳೆದ ಅಧಿವೇಶನದಲ್ಲಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಪ್ರಯತ್ನ ಹಾಗೂ ಸಂವಿಧಾನ ಬಾಹಿರ ಮೀಸಲು ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆದಿತ್ತು. ಈ ವೇಳೆ ಸ್ಪೀಕರ್ ಖಾದರ್ ಅವರು ಪಕ್ಷದ 18 ಶಾಸಕರನ್ನು ಅಮಾನತು ಮಾಡಿದ್ದಾರೆ.

ಪತ್ರ ಬರೆಯುವ ಭರವಸೆ

ನಿಯಮಬಾಹಿರ ಆದೇಶ ಮರು ಪರಿಶೀಲನೆಗೆ ಕೋರಿದರೂ ಸ್ಪಂದಿಸಿಲ್ಲ. ಶಾಸಕರ ಅಮಾನತು ತೆರವು ಬಗ್ಗೆ ಸ್ಪೀಕರ್ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದು, ಸ್ಪೀಕರ್ ಜತೆಗೆ ಮಾತನಾಡಿ ಪತ್ರ ಬರೆಯುವುದಾಗಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಭರವಸೆ ನೀಡಿದ್ದಾರೆ ಎಂದು ನಂತರ ಆರ್.ಅಶೋಕ್ ಹಾಗೂ ಬಿ.ವೈ.ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ಈ ಹಿಂದೆ ಕಾಂಗ್ರೆಸ್ ಶಾಸಕರು ಸ್ಪೀಕರ್ ಪೀಠಕ್ಕೆ ನುಗ್ಗಿದ್ದರು. ಆಗ ಪ್ರಜಾಪ್ರಭುತ್ವದ ಆಶಯದಂತೆ ಬಿಜೆಪಿ ಸರ್ಕಾರ ನಡೆದುಕೊಂಡಿತ್ತು. ಆಡಳಿತ ಪಕ್ಷದ ಜತೆಗೆ ವಿರೋಧ ಪಕ್ಷವೂ ಅಷ್ಟೇ ಮುಖ್ಯವೆಂದು ಸ್ಪೀಕರ್ ಹಾಗೂ ಕಾನೂನು ಸಚಿವರ ಜತೆಗೆ ಚರ್ಚಿಸಿ, ಅಮಾನತು ವಾಪಸ್‌ಗೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

ರಾಜ್ಯಪಾಲರ ಜತೆಗೆ ಚರ್ಚಿಸಿ ಮನವಿ ಸಲ್ಲಿಸುವ ಸಂದರ್ಭದಲ್ಲಿ ಶಾಸಕರಾದ ಕೆ.ಗೋಪಾಲಯ್ಯ, ರವಿಸುಬ್ರಮಣ್ಯ, ಉದಯ್ ಗರಡುಚಾರ್, ಸಿ.ಕೆ.ರಾಮಮೂರ್ತಿ ಇನ್ನಿತರರು ಇದ್ದರು.