ನವದೆಹಲಿ: ಕಳೆದ ವರ್ಷದ ಲೋಕಸಭೆ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮಾಡಿದ ಒಟ್ಟು ವೆಚ್ಚದಲ್ಲಿ ಭಾರತೀಯ ಜನತಾ ಪಕ್ಷವೊಂದರ ಪಾಲೇ ಶೇ. 44.56 ಆಗಿದೆ. 2024ರ ಸಾರ್ವತ್ರಿಕ ಚುನಾವಣೆ ಖರ್ಚಿನಲ್ಲಿ ಸಿಂಹಪಾಲು ಹೊಂದಿರುವ ಬಿಜೆಪಿಯ ವೆಚ್ಚದ ಮೊತ್ತ 1,494 ಕೋಟಿ ರೂಪಾಯಿ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಸಿ (ಎಡಿಆರ್) ಶುಕ್ರವಾರ ಹೇಳಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ 620 ಕೋಟಿ ರೂ. (ಶೇ. 18.5) ವೆಚ್ಚ ಮಾಡಿದೆ. ಒಟ್ಟು 32 ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ದಾಖಲೆಗಳನ್ನು ವಿಶ್ಲೇಷಿಸಿ ಚುನಾವಣಾ ವೆಚ್ಚದ ವರದಿಯನ್ನು ಸಿದ್ಧಪಡಿಸಿರುವುದಾಗಿ ಎಡಿಆರ್ ತಿಳಿಸಿದೆ.
2024ರ ಲೋಕಸಭೆ ಹಾಗೂ ಅದೇ ವರ್ಷ ಮಾರ್ಚ್ 16 ಮತ್ತು ಜೂನ್ 6ರ ನಡುವೆ ಏಕಕಾಲಕ್ಕೆ ನಡೆದ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಳಲ್ಲಿ ಈ ಪಕ್ಷಗಳು ಒಟ್ಟು 3,352.81 ಕೋಟಿ ರೂಪಾಯಿ ಖರ್ಚು ಮಾಡಿವೆ. ಆ ಪೈಕಿ ರಾಷ್ಟ್ರೀಯ ಪಕ್ಷಗಳು 2,204 ಕೋಟಿ ರೂ.ಗಿಂತ ಹೆಚ್ಚು (ಶೇ. 65.75) ವೆಚ್ಚ ಮಾಡಿವೆ. ಚುನಾವಣೆಗಾಗಿ ಸಂಗ್ರಹಿಸಿದ ಒಟ್ಟು ನಿಧಿಯಲ್ಲಿ ರಾಷ್ಟ್ರೀಯ ಪಕ್ಷಗಳು ಶೇ. 93.08ರಷ್ಟು, ಅಂದರೆ 6,930.246 ಕೋಟಿ ರೂ. ಸಂಗ್ರಹಿಸಿವೆ. ಪ್ರಾದೇಶಿಕ ಪಕ್ಷಗಳು 515.32 ಕೋಟಿ ರೂ. (ಶೇ. 6.92) ದೇಣಿಗೆ ಪಡೆದಿವೆ ಎಂದು ವರದಿ ಹೇಳಿದೆ.
ಲೋಕಸಭೆ ಚುನಾವಣೆ ನಡೆದ 90 ದಿನ ಹಾಗೂ ವಿಧಾನಸಭೆ ಚುನಾವಣೆಗಳ 75 ದಿನದೊಳಗೆ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಸಲ್ಲಿಸಬೇಕಾದ ವೆಚ್ಚದ ವಿವರವನ್ನು ಆಧರಿಸಿ ಎಡಿಆರ್ ಈ ವಿಶ್ಲೇಷಣೆ ನಡೆಸಿದೆ. ಕಾಂಗ್ರೆಸ್ ಪಕ್ಷ ಮಾತ್ರ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಗಳ ಕ್ರೋಡೀಕೃತ ವರದಿಗಳನ್ನು ಸಕಾಲದಲ್ಲಿ ಸಲ್ಲಿಸಿದೆ. ಆಮ್ ಆದ್ಮಿ ಪಕ್ಷ (ಆಪ್) ಮತ್ತು ಬಿಜೆಪಿ ವೆಚ್ಚ ವಿವರ ಸಲ್ಲಿಕೆಯಲ್ಲಿ ಗಣನೀಯ ವಿಳಂಬವಾಗಿದೆ ಎಂಬುದರತ್ತ ಎಡಿಆರ್ ವರದಿ ಗಮನ ಸೆಳೆದಿದೆ.