ಕೋಲಾರ : ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಬಿಜೆಪಿ ಮೇಲೆ ಗೂಬೆ ಕೂರಿಸಿ ವಿಕೃತಿ ಮೆರೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಹಗರಣದ ಆಯಾಮ ಇಲ್ಲದಿರುವುದರಿಂದ ಯಾವುದೇ ಪಾತ್ರಧಾರಿಗಳು ಇರುವ ಪ್ರಶ್ನೆಯೇ ಇಲ್ಲ. ಆದರೆ ಈ ಪ್ರಹಸನದಲ್ಲಿ ಹೊಸ ಹೊಸ ಪಾತ್ರಧಾರಿಗಳು ಹೊರಹೊಮ್ಮಿದ್ದು ಸಣ್ಣ ಕಡ್ಡಿಯನ್ನು ಗುಡ್ಡದಂತೆ ಬಿಂಬಿಸುತ್ತಾ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಆರೋಪಿ ಶ್ರೀಕೃಷ್ಣನ ಮೇಲಿರುವ ಬಿಟ್ ಕಾಯಿನ್ ದಂಧೆ ವಿಷಯವನ್ನು ತಿರುಚಿ ತಪ್ಪುದಾರಿಗೆ ಎಳೆಯುವ ಮೂಲಕ ಕಾಂಗ್ರೆಸ್ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪಕ್ಷಪಾತಿ ಮಾಹಿತಿ ಬಿಡುಗಡೆ ಮಾಡಿ ಬಿಜೆಪಿಯ ತೇಜೋವಧೆ ಮಾಡುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದರೂ ಕಾಂಗ್ರೆಸ್ ದುರುದ್ದೇಶಪೂರಿತ ಆರೋಪ ಹೊರಿಸುತ್ತಿದೆ ಎಂದರು.
ಇಷ್ಟು ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಬೊಬ್ಬೆ ಹೊಡೆಯುತ್ತಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಂಕ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟ ನಂತರ ಮಾತನಾಡಲು ಹೊಸ ವಿಚಾರವಿಲ್ಲದೆ ಈ ರೀತಿ ವಿಕೃತಿ ಮೆರೆಯುತ್ತಿದ್ದಾರೆ ಎಂದರು.
ಬಿಜೆಪಿ ಕೋರ್ ಕಮಿಟಿ ಸದಸ್ಯ ವಿಜಯಕುಮಾರ್ ಮಾತನಾಡಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಗುಂಪುಗಾರಿಕೆ ಮುಚ್ಚಿಹಾಕಿಕೊಳ್ಳಲು ಕಾಂಗ್ರೆಸ್ ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸುತ್ತಿದೆ ಎಂದರು.
ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಶ್ರೀಕಿ ತನ್ನ ಸ್ನೇಹಿತ, 2018ರಲ್ಲೇ ಪರಿಚಯವಾಗಿತ್ತು ಎಂದು ಕಾಂಗ್ರೆಸ್‌ನ ನಲಪಾಡ್ ಹೇಳಿದ್ದನ್ನು ಗಮನಿಸಿದರೆ ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರ ಅಲ್ಲಗಳೆಯುವಂತಿಲ್ಲ ಎಂದರು.
ಗೋಹತ್ಯೆ ನಿಷೇಧ ಜಾರಿಗೊಳಿಸಿ :
ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದರೂ ಕೋಲಾರದಲ್ಲಿ ಅನುಷ್ಠಾನಕ್ಕೆ ಜಿಲ್ಲಾಡಳಿತ ವಿಫಲವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ನಗರಾಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಾಜೇಶ್‌ಸಿಂಗ್, ಕಾರ್ಯದರ್ಶಿ ಮಂಜುನಾಥ್ ಗೋಷ್ಠಿಯಲ್ಲಿದ್ದರು.
ಗೆಲ್ಲಿಸುವುದು ನಮ್ಮ ಕೆಲಸ : ಕೋಲಾರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ 8 ಆಕಾಂಕ್ಷಿಗಳಿದ್ದು, ಬೇರೆ ಪಕ್ಷದಿಂದ ಬಂದರೂ ಅಥವಾ ಬಿಜೆಪಿಯವರೇ ಆಗಲಿ, ಪಕ್ಷ ಯಾರನ್ನು ಅಂತಿಮಗೊಳಿಸುತ್ತದೋ ಆ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ವಕ್ತಾರ ಎಸ್.ಬಿ. ಮುನಿವೆಂಕಟಪ್ಪ ತಿಳಿಸಿದರು.