ನ್ಯೂಸ್

ಗನ್​ ಪಾಯಿಂಟ್​ ಇಟ್ಟು ಲವ್​ ಪ್ರಪೋಸ್​ ಮಾಡಿದ ಪಾಗಲ್​ ಪ್ರೇಮಿ

ನವದೆಹಲಿ: ಇಬ್ಬರು ಪ್ರೇಮಿಗಳ ನಡುವೆ ಇರುವ ಅಗಾಧವಾದ ಪ್ರಿತಿಯನ್ನು ವ್ಯಕ್ತಪಡಿಸಲು ಜನರು ಮಾಡಿರುವ ಹಲವಾರು ರೀತಿಯ ಪ್ರಯೋಗಗಳನ್ನು ನಾವು ನೋಡಿದ್ದೇ ಹಾಗೂ ಕೇಳಿದ್ದೇವೆ. ಇದೀಗ ವ್ಯಕ್ತಿಯೊಬ್ಬರು ತಮ್ಮ ಪ್ರೇಯಸಿಗೆ ವಿಭಿನ್ನವಾಗಿ ಮನದ ಮಾತನ್ನು ಹೇಳುವ ಮೂಲಕ ಸುದ್ದಿಯಾಗಿದ್ದು, ಕೊಲಂಬಿಯಾದಲ್ಲಿ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಹೀಗೂ ಪ್ರಪೋಸ್​ ಮಾಡಬಹುದಾ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಈ ರೀತಿ ಮಾಡುವ ಮುನ್ನ ಎಚ್ಚರ ವಹಿಸುವುದು ಅಗತ್ಯ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ, ಕೆಲವು ಮುಸುಕುಧಾರಿ ವ್ಯಕ್ತಿಗಳು ಕಾರೊಂದನ್ನು ಅಡ್ಡಗಟ್ಟಿ ಅದರಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಕೆಳಗಿಳಿಯುವಂತೆ ಸೂಚಿಸುತ್ತಾರೆ. ಈ ವೇಳೆ ಕೆಳಗಿಸಳಿಯುವ ಮಹಿಳೆ ಬಳಿ ಬಂದು ವ್ಯಕ್ತಿಯೋರ್ವ ಮಂಡಿಯೂರಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ಇದನ್ನು ಕಂಡು ಆಘಾತ ಮತ್ತು ಆಶ್ಚರ್ಯಕ್ಕೊಳಗಾದ ಮಹಿಳೆ ಬಳಿಕ ಆ ವ್ಯಕ್ತಿಯ ಪ್ರೇಮವನ್ನು ಒಪ್ಪಿಕೊಂಡು ಚುಂಬಿಸುತ್ತಾಳೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದು ಮದುವೆಗಿಂತ ಕಡಿಮೆ ಅಪಾಯಕಾರಿ ಎಂದು ಕಮೆಂಟ್​ ಮಾಡಿದ್ದಾರೆ. ಕೆಲವರು ವ್ಯಕ್ತಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ ರಿತಿ ಒಪ್ಪಿಕೊಂಡರೆ ಇನ್ನೂ ಕೆಲವರು ಆತನ ನಡೆಯನ್ನು ಖಂಡಿಸಿದ್ದಾರೆ. ಆದರೆ, ಈ ವಿಡಿಯೋ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.