ನ್ಯೂಸ್

VIDEO| ಚೀನಾದಲ್ಲಿ ಮರಣ ಮೃದಂಗ ಮುಂದುವರಿಸಿರೋ ಕೊರೊನಾ ವೈರಸ್​ಗೆ ಅಂತ್ಯಹಾಡಿದ ರಾಖಿ ಸಾವಂತ್!​

ನವದೆಹಲಿ: ಚೀನಾದಲ್ಲಿ ಮರಣ ಮೃದಂಗ ಮುಂದುವರಿಸಿ ಇನ್ನಿತರ ದೇಶಗಳಿಗೂ ಹರಡಿರುವ ಮಾರಕ ಕೊರೊನಾ ವೈರಸ್ ಭೀತಿ ಸೃಷ್ಟಿಸಿದೆ.​ ಸೋಂಕಿಗೆ ಔಷಧ ಕಂಡು ಹಿಡಿಯುವಲ್ಲಿ ಜಾಗತಿಕ ಮಟ್ಟದಲ್ಲಿ ನಾನಾ ಪ್ರಯತ್ನಗಳು ಮುಂದುವರಿದಿರುವ ಬೆನ್ನಲ್ಲೇ ಬಾಲಿವುಡ್​ ವಿವಾದಿತ ನಟಿ ರಾಖಿ ಸಾವಂತ್​ ಚೀನಾಗೆ ತೆರಳಿ ಕೊರೊನಾ ವೈರಸ್​ಗೆ ಮುಕ್ತಿ ನೀಡಿದ್ದಾಗಿ ಹೇಳಿದ್ದಾರೆ.

ಅಚ್ಚರಿ ಎಂದರೆ ತಮ್ಮ ಪ್ರಾಣ ಉಳಿಸಿಕೊಳ್ಳಲು ಸಾಕಷ್ಟು ಮಂದಿ ಚೀನಾ ತೊರೆಯುತ್ತಿದ್ದರೆ, ಸಾವಂತ್​ ಮಾತ್ರ ಚೀನಾಗೆ ತೆರಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಾವಂತ್​ ಹರಿಬಿಟ್ಟಿದ್ದರು. ವಿಡಿಯೋದಲ್ಲಿರುವಂತೆ ವಿಮಾನದಲ್ಲಿ ಕುಳಿತಿರುವ ಸಾವಂತ್​ ಚೀನಾಗೆ ತೆರಳುತ್ತಿರುವುದಾಗಿ ಹಾಗೂ ಕೊರೊನಾ ವೈರಸ್​ಗೆ ಅಂತ್ಯ ಹಾಡಲಿದ್ದೇನೆ ಕಾದು ನೋಡಿರಿ ಎಂದಿದ್ದರು. ವಿಮಾನದಲ್ಲಿ ನಾನೊಬ್ಬಳೇ ಇಲ್ಲ. ನನ್ನೊಂದಿಗೆ ಭಾರತದ ಸಿಪಾಯಿಗಳು ಇದ್ದಾರೆ. ನಾವೆಲ್ಲ ಹೋಗಿ ವೈರಸ್​ಗೆ ಪೂರ್ಣ ವಿರಾಮ ಇಡಲಿದ್ದೇವೆ ಎಂದು ಹೇಳಿದ್ದರು. ಇದೇ ವೇಳೆ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸಿ, ಮೋದಿಜಿ ನಾವು ಚೀನಾಗೆ ಹೋಗುತ್ತಿದ್ದೇವೆ. ನಮಗಾಗಿ ಪಾರ್ಥನೆ ಮಾಡಿ ಎಂದಿದ್ದರು.

ಚೀನಾದಲ್ಲಿ ಸುಮಾರು 24,000 ಹಾಗೂ ಜಗತ್ತಿನ ಇತರೆ ದೇಶಗಳಲ್ಲಿ ಸುಮಾರು 100 ಮಂದಿಗೆ ಸೋಕು ತಗುಲಿದ್ದಾರೆ. ಇದನ್ನೆಲ್ಲಾ ಸಾವಂತ್​ ಹೇಗೆ ಗುಣಪಡಿಸಲಿದ್ದಾರೆ ಎಂಬ ಕುತೂಹಲವಿತ್ತು. ವೈರಸ್​ ನಾಶಪಡಿಸಲು ಸಾವಂತ್​ ಅವರು ವಿಶೇಷ ಔಷಧವನ್ನು ನಾಸಾದಿಂದ ಕೊಂಡು ತಂದಿದ್ದಾರಂತೆ. ಅದು ಖಂಡಿತವಾಗಿ ರೋಗವನ್ನು ಗುಣಪಡಿಸಲಿದೆ ಎಂದು ವಿಡಿಯೋದಲ್ಲಿ ಸಾವಂತ್​ಹೇಳಿಕೊಂಡಿದ್ದರು.

ಇಂದು ಬೆಳಗ್ಗೆ ಎರಡನೇ ವಿಡಿಯೋ ಪೋಸ್ಟ್​ ಮಾಡಿರುವ ಸಾವಂತ್​, ತನ್ನ ಉದ್ದೇಶ ಹೇಗೆ ಸಫಲವಾಯಿತು ಎಂದು ಹೇಳಿಕೊಂಡಿದ್ದಾರೆ. ಚೀನಾದ ಪ್ರತಿ ಮನೆಯ ಬಾಗಿಲಿಗೆ ಹೋಗಿ ನಾಸಾದ ಔಷಧವನ್ನು ಶೌಚಗೃಹ, ಕಿಚನ್​, ಆಹಾರ ಮತ್ತು ಎಲ್ಲೆಡೆ ಹರಡಿದ್ದಾಗಿ ಹೇಳಿಕೊಂಡಿದ್ದಾರೆ. ಅದು ಖಂಡಿತವಾಗಿ ವೈರಸ್​ ಅನ್ನು ನಾಶ ಪಡಿಸಲಿದೆ ಎಂದಿದ್ದಾರೆ.

ಇದುವರೆಗೂ ನಾವು ಹೇಳಿದ್ದನ್ನು ನಿಜವೆಂದು ಭಾವಿಸಬೇಡಿ. ಏಕೆಂದರೆ ಸದಾ ಹಲವು ವಿಚಾರಗಳ ಬಗ್ಗೆ ವ್ಯಂಗ್ಯ ಮಾಡುವ ಸಾವಂತ್​, ಪ್ರಸ್ತುತ ಜಗತ್ತಿನೆಲ್ಲೆಡೆ ಸದ್ದು ಮಾಡಿರುವ ವೈರಸ್​ ಕುರಿತಾಗಿ ತಮ್ಮದೇ ರೀತಿಯಲ್ಲಿ ಕಲ್ಪನೆಯ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿದ್ದಾರೆ. ಸಾವಂತ್​ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಟೀಕೆಗೆ ಹಾಗೂ ಟ್ರೋಲಿಗೂ ದಾಳವಾಗಿದೆ. (ಏಜೆನ್ಸೀಸ್​)