ನ್ಯೂಸ್

ಬಿಟ್ ಕಾಯಿನ್ ಹಗರಣ; ಎಸ್‌ಐಟಿಯಿಂದ ಹ್ಯಾಕರ್ ಶ್ರೀಕಿ ಡ್ರಿಲ್

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಬಿಟ್ ಕಾಯಿನ್ ಹಗರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ಪ್ರಮುಖ ಆರೋಪಿ ಅಂತಾರಾಷ್ಟ್ರೀಯ ಹ್ಯಾಕರ್‌ನ್ನು ವಿಚಾರಣೆಗೆ ಒಳಪಡಿಸಿದೆ.

ಬಸವನಗುಡಿಯ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿಚಾರಣೆಗೆ ಒಳಗಾದ ಹ್ಯಾಕರ್.

ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಆವರಣದಲ್ಲಿ ಇರುವ ಎಸ್‌ಐಟಿ ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ಶ್ರೀಕಿ ಹಾಜರಾಗಿದ್ದ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸುದೀರ್ಘ ಹೇಳಿಕೆ ನೀಡಿದ ಶ್ರೀಕಿಗೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಸಾಕ್ಷಿನಾಶದ ಆರೋಪದಡಿ ಸಿಸಿಬಿ ತನಿಖಾಧಿಕಾರಿಗಳ ವಿರುದ್ಧ ಎಸ್‌ಐಟಿ ಎಫ್ಐಆರ್ ದಾಖಲಿಸಿದೆ. ಮುಂದುವರಿದ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು, ಕಾಟನ್‌ಪೇಟೆ ಠಾಣೆಯ ಬಿಟ್ ಕಾಯಿನ್ ಪ್ರಕರಣ ಮತ್ತು ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ 2019ರಲ್ಲಿ ಇ-ಸಂಗ್ರಹಣ ತಂತ್ರಾಂಶಕ್ಕೆ (ಇ-ಪ್ರಕ್ಯೂರ್‌ಮೆಂಟ್) 7 ಕೋಟಿ ರೂ. ಕನ್ನ ಪ್ರಕರಣದ ತನಿಖೆಯನ್ನು ಕೈಗೊಂಡಿದೆ.

ಮೂರು ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳ ಕೈವಾಡ ಇರುವುದು ಗೊತ್ತಾಗಿದೆ. ಕಿಂಗ್‌ಪಿನ್ ಹ್ಯಾಕರ್ ಮೂರು ಕೇಸಿನಲ್ಲೂ ಕೈವಾಡ ಇರುವುದು ಗೊತ್ತಾಗಿದೆ. ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್ ಇತರೆ ವಸ್ತುಗಳನ್ನು ಮೂರು ಕೇಸಿನಲ್ಲೂ ಒಂದೇ ಸಾಕ್ಷ್ಯವಾಗಿವೆ.

ಈ ಹಿನ್ನೆಲೆಯಲ್ಲಿ ಕೆಂಪೇಗೌಡನಗರ, ಕಾಟನ್‌ಪೇಟೆ ಮತ್ತು ಸಿಐಡಿ ಸೈಬರ್ ಕ್ರೈಂನಲ್ಲಿ ದಾಖಲಾಗಿರುವ 3 ಕೇಸು ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.