ನ್ಯೂಸ್

ಬಿಟ್ ಕಾಯಿನ್ ರಿಕವರಿ ಅಸಾಧ್ಯ!

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಕ್ರಿಪ್ಟೋ ಕರೆನ್ಸಿಯನ್ನೇ ಜಪ್ತಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪ್ರಕರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಬಿಟ್ ಕಾಯಿನ್ ಕಳೆದುಕೊಂಡಿರುವ ಮತ್ತು ಕೋಟ್ಯಂತರ ರೂ. ನಷ್ಟಕ್ಕೆ ಒಳಗಾಗಿರುವ ಕ್ರಿಪ್ಟೋ ಕರೆನ್ಸಿ ಕಂಪನಿ ಮತ್ತು ಗೇಮಿಂಗ್ ಪೋರ್ಟಲ್‌ಗಳೇ ಎಸ್‌ಐಟಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಇದರ ಪರಿಣಾಮ ತನಿಖೆ ತಾರ್ಕಿಕ ಅಂತ್ಯ ಕಾಣಿಸಲು ತನಿಖಾಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಸರ್ಕಾರಿ ವೆಬ್‌ಸೈಟ್, ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್, ಗೇಮಿಂಗ್ ಪೋರ್ಟಲ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ. ವರ್ಗಾವಣೆ ಮಾಡಿರುವ ಬಿಟ್ ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕಿ ಮತ್ತು ಆತನ ಸಹಚರರು ವಿರುದ್ಧ ಆರೋಪ ಕೇಳಿಬಂದಿದೆ.

ಶ್ರೀಕಿ, ವಿಚಾರಣೆ ವೇಳೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಇಷ್ಟೇ ಪ್ರಮಾಣದಲ್ಲಿ ಬಿಟ್ ಕಾಯಿನ್ ವರ್ಗಾವಣೆ ಮಾಡಿರುವುದಾಗಿ ಸಮಗ್ರ ಹೇಳಿಕೆ ನೀಡಿಲ್ಲ. ಆರೋಪಿಯ ಹೇಳಿಕೆಯ ನೈಜತೆ ಪರಿಶೀಲಿಸಲು ದೇಶ-ವಿದೇಶಗಳ ಆನ್‌ಲೈನ್ ಗೇಮಿಂಗ್ ಮತ್ತು ಬಿಟ್ ಕಾಯಿನ್ ಎಕ್ಸೃ್ಚೇಂಜ್ ಕಂಪನಿಗಳಿಗೆ ಇಂಟರ್‌ಪೋಲ್ ಮೂಲಕ ಮಾಹಿತಿ ಕೋರಿ ಎಸ್‌ಐಟಿ ಪತ್ರ ಬರೆದಿತ್ತು. ಪತ್ರ ಬರೆದು ಹಲವು ತಿಂಗಳೇ ಕಳೆದರು ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಎಸ್‌ಐಟಿ ತನಿಖೆಗೆ ತೊಡಕು ಉಂಟಾಗಿದ್ದು, ಕೆಲದಿನಗಳ ಬಳಿಕ ಮತ್ತೆ ಇಂಟರ್‌ಪೋಲ್ ಮೂಲಕ ಮನವಿ ಪತ್ರ ನೀಡಲು ಸಿದ್ಧತೆ ನಡೆಸಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಬಿಟ್ ಕಾಯಿನ್ ಮತ್ತು ಡ್ರಗ್ಸ್ ದಂಧೆಯಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟು ಸೇರಿ ಕೆ.ಜಿ. ನಗರ, ಕಾಟನ್‌ಪೇಟೆ, ಅಶೋಕನಗರ, ಕಬ್ಬನ್ ಪಾರ್ಕ್, ತುಮಕೂರು ನ್ಯೂ ಎಕ್ಸ್‌ಟೆನ್ಷನ್ ಪೊಲೀಸ್ ಠಾಣೆಯಲ್ಲಿ ಸೇರಿ 8 ಪ್ರಕರಣಗಳು ದಾಖಲಾಗಿದ್ದು, ಎಸ್‌ಐಟಿ ತನಿಖೆ ನಡೆಸುತ್ತಿದೆ. ಬಿಟ್ ಕಾಯಿನ್ ಟ್ರೇಡಿಂಗ್, ಬ್ಲಾಕ್‌ಚೈನ್, ಡಾರ್ಕ್ ವೆಬ್‌ಗಳನ್ನು ಮಾಹಿತಿ ಕಲೆಹಾಕುವ ಕಾರ್ಯ ನಡೆಯುತ್ತಿದೆ. ಅಮೆರಿಕ, ಹಾಂಕಾಂಗ್, ಕೋರಿಯಾ, ಸಿಂಗಾಪುರ, ಇರಾನ್, ಫಿನ್‌ಲೆಂಡ್, ಟರ್ಕಿ, ನೈಜೀರಿಯಾ, ಲೆಕ್ಸಂಬರ್ಗ್‌ಗಳಿಗೆ ಮಾಹಿತಿ ಕೋರಿ ಎಸ್‌ಐಟಿ ಪತ್ರ ಬರೆದಿತ್ತು. ಇದಲ್ಲದೆ, ಐರ್ಲೆಂಡ್, ಸಿಷೆಲ್ಸ್, ಸ್ವಿಜರ್‌ಲ್ಯಾಂಡ್ ಮುಂತಾದ ದೇಶಗಳಿಂದ ಅಗತ್ಯ ಮಾಹಿತಿ ತರಿಸಿಕೊಡುವಂತೆ ಕೋರಿ ಇಂಟರ್‌ಪೋಲ್ ಮುಖಾಂತರ ಎಸ್‌ಐಟಿ ಮನವಿ ಮಾಡಿತ್ತು. ಆದರೆ ಈವರೆಗೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

8ರಲ್ಲಿ 2 ಕೇಸ್‌ನಲ್ಲಿ ಚಾರ್ಜ್‌ಶೀಟ್

ಬಿಟ್ ಕಾಯಿನ್ ಹಗರಣದ 8 ಪ್ರಕರಣಗಳ ತನಿಖೆ ಕೈಗೊಂಡಿರುವ ಎಸ್‌ಐಟಿ, 150ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ ಸಾಕ್ಷಿಗಳಾಗಿ ಹೇಳಿಕೆ ಪಡೆದಿದೆ. ಅಶೋಕನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಶ್ರೀಕಿ, ಆತನ ಸ್ನೇಹಿತರಾದ ರಾಬಿನ್ ಖಂಡೇವಾಲಾ, ಸುಜಯ್, ಸುನೀಶ್ ಹೆಗ್ಡೆ ಹಾಗೂ ಹೇಮಂತ್ ಮುದ್ದಪ್ಪ ಸೇರಿ 10 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಡ್ರಗ್ಸ್ ಖರೀದಿಯಲ್ಲಿ ಆರೋಪಿಗಳು ಬಿಟ್ ಕಾಯಿನ್ ಬಳಸಿರುವುದು ತನಿಖೆಯಲ್ಲಿ ರುಜುವಾತಾಗಿದೆ.

ಅಧಿಕಾರಿಗಳಿಗೆ ಸಂಕಷ್ಟ?

ಬಿಟ್ ಕಾಯಿನ್ ಹಗರಣದಲ್ಲಿ ಸಾಕ್ಷಾೃಧಾರಗಳ ನಾಶ ಆರೋಪದಲ್ಲಿ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟು ಎದುರಾಗುವ ಸಾಧ್ಯತೆಗಳಿವೆ. 2020ರಲ್ಲಿ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಸಿಸಿಬಿಯ ಅಂದಿನ ತನಿಖಾಧಿಕಾರಿಗಳಾಗಿದ್ದ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ, ಶ್ರೀಧರ್ ಪೂಜಾರ್, ಪ್ರಶಾಂತ್ ಬಾಬು ಮತ್ತು ಚಂದ್ರಾಧರ್ ವಿರುದ್ಧ ಡಿಜಿಟಲ್ ಸಾಕ್ಷ್ಯಗಳನ್ನು ತಿರುಚಿ, ನಾಶಪಡಿಸಿದ ಆರೋಪವೂ ಕೇಳಿಬಂದಿತ್ತು. ಇದರಲ್ಲಿ ಆರೋಪಪಟ್ಟಿ ಸಲ್ಲಿಸಲು ಎಸ್‌ಐಟಿ ಸಿದ್ದತೆ ನಡೆಸುತ್ತಿದೆ.