ನಿತ್ಯ ವಾಹನಗಳಿಂದ ಗಿಜಿಗುಡುತ್ತಿದ್ದ ತುಮಕೂರು ರಸ್ತೆ ಕರ್ಫ್ಯೂ ಹಿನ್ನೆಲೆಯಲ್ಲಿ ಖಾಲಿಖಾಲಿಯಾಗಿರುವುದು. 
ನ್ಯೂಸ್

ಆತಂಕದ ನಡುವೆಯೂ ಕೊಂಚ ನೆಮ್ಮದಿ; ತೀವ್ರತೆ ಇದ್ದರೂ ಆಸ್ಪತ್ರೆ ದಾಖಲಾತಿ ಕಡಿಮೆ; 15 ದಿನದಲ್ಲಿ 1.5 ಲಕ್ಷ ಕೇಸ್ ದಾಖಲು

Webdesk - Ravikanth

ಬೆಂಗಳೂರು: ರಾಜ್ಯದಲ್ಲಿ ಕಳೆದ 15 ದಿನಗಳಿಂದೀಚೆಗೆ ಒಂದೂವರೆ ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿವೆಯಾದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೇವಲ ಶೇ.5-6 ಇರುವುದು ಕೊಂಚ ನೆಮ್ಮದಿ ಮೂಡಿಸಿದೆ. ಶೇ.80ಕ್ಕೂ ಅಧಿಕ ಮಂದಿ ಕೋವಿಡ್ ಲಸಿಕೆ ಪಡೆದಿರುವುದು ಹಾಗೂ 3ನೇ ಅಲೆಯಲ್ಲಿ ಒಮಿಕ್ರಾನ್ ರೂಪಾಂತರಿ ತಳಿ ತೀವ್ರತೆ ಕಡಿಮೆ ಇರುವುದು ಆಸ್ಪತ್ರೆ ದಾಖಲಾತಿ ಸಂಖ್ಯೆ ಇಳಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

32,793 ಹೊಸ ಕೇಸ್: ರಾಜ್ಯದಲ್ಲಿ ಶನಿವಾರ 2.18 ಲಕ್ಷಕ್ಕೂ ಅಧಿಕ ಕೋವಿಡ್ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 32,793 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ.15ಕ್ಕೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 1.69 ಲಕ್ಷಕ್ಕೆ ಏರಿಕೆಯಾಗಿದೆ.

15 ಜಿಲ್ಲೆಗಳಲ್ಲಿ ವ್ಯಾಪಕ: ಬೆಂಗಳೂರು ನಗರ ಸೇರಿ 15 ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿದ್ದು, ಬೆಂಗಳೂರು ನಗರದಲ್ಲಿ ಅತೀ ಹೆಚ್ಚು 22,284, ತುಮಕೂರು 1,326, ಹಾಸನ 968, ದಕ್ಷಿಣ ಕನ್ನಡ 792, ಮೈಸೂರು 729, ಮಂಡ್ಯ 718, ಧಾರವಾಡ 648, ಉಡುಪಿ 607, ಕೋಲಾರ 541, ಬೆಂಗಳೂರು ಗ್ರಾಮಾಂತರ 503, ಬೆಳಗಾವಿ 393, ಕಲಬುರಗಿ 384, ಚಿಕ್ಕಬಳ್ಳಾಪುರ 311, ಶಿವಮೊಗ್ಗ 305, ಬಳ್ಳಾರಿ 410 ಪ್ರಕರಣಗಳು ವರದಿಯಾಗಿವೆ. ಉಳಿದ 15 ಜಿಲ್ಲೆಗಳಲ್ಲಿ 250ಕ್ಕಿಂತ ಕಡಿಮೆ ಪ್ರಕರಣಗಳು ದೃಢಪಟ್ಟಿವೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಐವರು, ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ ತಲಾ ಒಬ್ಬರು ಸೇರಿ 7 ಮಂದಿ ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 38,418 ತಲುಪಿದೆ. 4,273 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಗುಣಮುಖರ ಒಟ್ಟು ಸಂಖ್ಯೆ 29.77 ಲಕ್ಷ ಮೀರಿದೆ. ಈವರೆಗೂ 31.86 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

ಸಚಿವ, ಶಾಸಕರಿಗೆ ಕರೊನಾ

  • ಸಚಿವ ಎಂಟಿಬಿ ನಾಗರಾಜ್, ರಾಮನಗರ ಕ್ಷೇತ್ರದ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರಿಗೆ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ.
  • ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಕರೊನಾ ಸೋಂಕು ದೃಢವಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೊನಾ ಕಾಣಿಸಿಕೊಂಡಿತ್ತು.

ವಾರಾಂತ್ಯ ಕರ್ಫ್ಯೂ ಕೇರ್ ಮಾಡದ ಜನ

ಬೆಂಗಳೂರು: ರಾಜ್ಯದಲ್ಲಿ ಕರೊನಾ 3ನೇ ಅಲೆ ಕಟ್ಟಿಹಾಕಲು ಪ್ರಯೋಗಿಸಿರುವ ‘ವಾರಾಂತ್ಯ ಕರ್ಫ್ಯೂ’ಗೆ ಈ ಬಾರಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.70 ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ, ಬಹುತೇಕ ಕಡೆಗಳಲ್ಲಿ ಜನರ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿರಲಿಲ್ಲ. ಅಗತ್ಯ ಸೇವೆ ಹೆಸರಿನಲ್ಲಿ ಪೊಲೀಸರ ಕಣ್ತಪ್ಪಿಸಿ, ಸಾವಿರಾರು ಜನ ಎಂದಿನಂತೆ ಓಡಾಡುತ್ತಿರುವುದು ಸಾಮಾನ್ಯವಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆಯೂ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ರಸ್ತೆಯುದ್ದಕ್ಕೂ ಮಾರಾಟ ಮಾಡುತ್ತಿರುವ ತರಕಾರಿ, ಹಣ್ಣು ಕೊಳ್ಳಲು ಮುಗಿಬಿದ್ದಿರುವ ಜನರು ವ್ಯಾಪಾರಿ ಗಳೊಂದಿಗೆ ಚೌಕಾಸಿ ಮಾಡುತ್ತಾ ಗಂಟೆಗಟ್ಟಲೆ ಅಲ್ಲೇ ಕಾಲ ಕಳೆದರು. ಸರ್ಕಾರ ಕೆಲಸ ಹೊರತುಪಡಿಸಿ ನಿರ್ಮಾಣ ವಲಯ, ಕೈಗಾರಿಕಾ ವಲಯ, ಖಾಸಗಿ ಕಚೇರಿ ಸಿಬ್ಬಂದಿ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಆಟೋ, ಟ್ಯಾಕ್ಸಿ, ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳ ಸಂಖ್ಯೆ ಕಡಿಮೆಯಿದ್ದರೂ ಕಾರು, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿತ್ತು.

ಪೊಲೀಸ್ ಬಿಗಿ ಬಂದೋಬಸ್ತ್: ಎಲ್ಲ ಪ್ರಮುಖ ರಸ್ತೆ, ಮೇಲ್ಸೇತುವೆಗಳನ್ನು ಬ್ಲಾಕ್ ಮಾಡಲಾಗಿತ್ತು. ಅನಗತ್ಯವಾಗಿ ಓಡಾಡುತ್ತಿದ್ದ ಸಾವಿರಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲಾ ಗಡಿ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟು ಬಂದೋಬಸ್ತ್ ಏರ್ಪಡಿಸಿದ್ದರು. ಆಯಾ ಜಿಲ್ಲೆಗಳಲ್ಲಿ ರಸ್ತೆ ಬದಿ ನಿರ್ವಿುಸಿರುವ ನೂರಾರು ಚೆಕ್​ಪೋಸ್ಟ್​ಗಳಲ್ಲಿ ಪೊಲೀಸರು ಬಿಗಿ ವಾಹನ ತಪಾಸಣೆ ನಡೆಸಿದರು.