ನ್ಯೂಸ್

3.66 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಕದ್ದ ಖದೀಮರು

ಬೆಂಗಳೂರು: ಬಿಟ್ ಕಾಯಿನ್ ವ್ಯವಹಾರದಲ್ಲಿ ನಡೆಸುತ್ತಿದ್ದ ಉದ್ಯಮಿಗಳ ವ್ಯಾಲೆಟ್ ಪಾಸ್​ವರ್ಡ್ ಕದ್ದು ಸೈಬರ್ ಕಳ್ಳರು 3.66 ಕೋಟಿ ರೂ. ದೋಚಿದ್ದಾರೆ.

ಈ ಸಂಬಂಧ ಮಹದೇವಪುರದ ಬಿಟ್​ಚಿಫೆರ್ ಲ್ಯಾಬ್ಸ್ ಎಲ್​ಎಲ್​ಪಿ ಕಂಪನಿಯ ಅಶಿಷ್ ಸಿಂಗಾಲ್ ಎಂಬು ವರು ಸಿಐಡಿಯ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದಾರೆ. ವಿಮಲ್ ಸಾಗರ್ ತಿವಾರಿ, ಗೋವಿಂದ್ ಕುಮಾರ್ ಸೋನಿ ಸೇರಿ ಬಿಟ್​ಚಿಫೆರ್ ಲ್ಯಾಬ್ಸ್ ಕಂಪನಿಯ ವ್ಯಾಲೆಟ್ ಹೊಂದಿದ್ದೇವೆ. ಈ ಮೂಲಕ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದು, ಎಲ್ಲ ಪಾಸ್​ವರ್ಡ್ ಗಳನ್ನು ವ್ಯಾಲೆಟ್​ನಲ್ಲಿ ಸಂಗ್ರಹಿಸಲಾಗಿತ್ತು. ಆದರೆ, ಇತ್ತೀಚೆಗೆ ಸೈಬರ್ ಕಳ್ಳರು ಜ.11ರಿಂದ ಮಾ.11ರ ನಡುವೆ ವ್ಯಾಲೆಟ್​ಗೆ ಲಾಗಿನ್ ಆಗಿ ಪಾಸ್​ವರ್ಡ್ ಕದ್ದಿದ್ದಾರೆ. ಇದರಿಂದಾಗಿ 3.66 ಕೋಟಿ ರೂ. ಬಿಟ್ ಕಾಯಿನ್ ಕೈತಪ್ಪಿದ್ದು, ಆರೋಪಿಗಳನ್ನು ಪತ್ತೆ ಮಾಡಿ ಹಣ ವಾಪಸ್ ಬರುವಂತೆ ಮಾಡಬೇಕೆಂದು ದೂರಿನಲ್ಲಿ ಅಶಿಷ್ ಸೋನಿ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸೈಬರ್ ಲ್ಯಾಬ್ ತಜ್ಞರ ಸಹಾಯ ಕೋರಲಾಗಿದೆ ಎಂದು ಸೈಬರ್ ಕ್ರೖೆಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಏನಿದು ಬಿಟ್ ಕಾಯಿನ್?: ಬಿಟ್ ಕಾಯಿನ್ ಕಾಗದರಹಿತ ಡಿಜಿಟಲ್ ಕರೆನ್ಸಿ. ರೂಪಾಯಿ, ಡಾಲರ್, ಯೂರೋ ಅಥವಾ ಇನ್ಯಾವುದೇ ದೇಶದ ಅಧಿಕೃತ ಕರೆನ್ಸಿಯ ಮಾದರಿಯಲ್ಲಿ ಇರುವುದಿಲ್ಲ. ಎಲ್ಲ ವ್ಯವಹಾರ ಇಂಟರ್​ನೆಟ್​ನಲ್ಲಿ ನಡೆಯಲಿದೆ. ಜಗತ್ತಿನ ಯಾವುದೇ ಭಾಗದಿಂದ ಕೆಲವೇ ನಿಮಿಷಗಳಲ್ಲಿ ಹಣ ಕಳುಹಿಸಲು ಅಥವಾ ಪಡೆಯಲು ಬಳಸುತ್ತಾರೆ.