ನ್ಯೂಸ್

ತರಗತಿ ಶುರುವಾದರೂ ಬೇಯದ ಅನ್ನ, ಮಕ್ಕಳಿಗಿಲ್ಲ ಬಿಸಿಯೂಟ

| ಬೇಲೂರು ಹರೀಶ ಬೆಂಗಳೂರು

ಶಾಲಾ ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಿಸಿಯೂಟ’ ಯೋಜನೆಗೆ ಅಧಿಕಾರಿಗಳ ನಿರ್ಲಕ್ಷ್ಯದ ಗ್ರಹಣ ಕವಿದಿದೆ. ಕರೊನಾದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಯೋಜನೆಗೆ ಶಾಲೆಗಳು ಪುನರಾರಂಭವಾದರೂ ಚಾಲನೆ ಸಿಗದಿರುವುದು ಒಂದೆಡೆಯಾದರೆ, ಬಿಸಿಯೂಟದ ಬದಲಿಗೆ ಮಕ್ಕಳಿಗೆ ವಿತರಿಸಬೇಕಿದ್ದ ಆಹಾರ ಧಾನ್ಯವೂ ಕೈಸೇರದಂತಾಗಿದೆ.

2020ರ ನವೆಂಬರ್​ನಿಂದ 2021ರ ಮಾರ್ಚ್​ವರೆಗೆ ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲು ಆದೇಶವಾಗಿದೆ. ಇದಕ್ಕಾಗಿ ಸರ್ಕಾರ 515 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೂ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ(ಕೆಎಫ್​ಸಿಎಸ್​ಸಿ)ದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಟೆಂಡರ್ ಪ್ರಕ್ರಿಯೆಯೇ ಶುರುವಾಗಿಲ್ಲ. ಕರೊನಾ ಭೀತಿಯಿಂದ ಕಳೆದ ಮಾರ್ಚ್​ನಲ್ಲೇ ಶಾಲೆಗಳಿಗೆ ರಜೆ ಘೊಷಿಸಲಾಗಿತ್ತು. ಹಾಗಾಗಿ, ಜೂನ್​ನಿಂದ ಅಕ್ಟೋಬರ್ ಅವಧಿಯಲ್ಲಿ 108 ದಿನಗಳ ಕಾಲ (ಸಾರ್ವತ್ರಿಕ ರಜೆ ಹೊರತುಪಡಿಸಿ) ಬಿಸಿಯೂಟ ಬದಲಿಗೆ, ಆಹಾರ ಭದ್ರತಾ ಭತ್ಯೆಯಂತೆ ಆಹಾರ ಧಾನ್ಯಗಳನ್ನೇ ವಿದ್ಯಾರ್ಥಿಗಳಿಗೆ ವಿತರಿಸಲು ಸರ್ಕಾರ ನಿರ್ಧರಿಸಿತ್ತು. ಇದರಂತೆ 2 ಹಂತದಲ್ಲಿ ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಂಡಿತ್ತು.

ಪ್ರಥಮ ಹಂತದಲ್ಲಿ ಜೂನ್ ಮತ್ತು ಜುಲೈ ತಿಂಗಳ( 53 ದಿನಗಳಿಗೆ) ಆಹಾರಧಾನ್ಯವನ್ನು ವಿತರಿಸಲಾಗಿದೆ. ಆದರೆ, ಆಗಸ್ಟ್​ನಿಂದ ಅಕ್ಟೋಬರ್​ವರೆಗಿನ 55 ದಿನಗಳ ಆಹಾರ ಧಾನ್ಯಗಳ ವಿತರಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ಪಾಲಕರಿಗೂ ಹೊರೆ: ಕರೊನಾದಿಂದಾಗಿ ಬಡ ಕುಟುಂಬಗಳು ಇನ್ನೂ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ. ಇಂದಿಗೂ ಸಾಕಷ್ಟು ಜನ ಸರಿಯಾದ ಕೆಲಸ ಇಲ್ಲದೆ ಆರ್ಥಿಕ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಈ ಹಿಂದೆ ಶಾಲೆಗಳಲ್ಲೇ ಬಿಸಿಯೂಟ ಸೇವಿಸುತ್ತಿದ್ದರಿಂದ ಬಡ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ಸಿಗುತ್ತಿತ್ತು. 1-5ನೇ ತರಗತಿ ಮಕ್ಕಳಿಗೆ 100 ಗ್ರಾಂ ಅಕ್ಕಿ, 20 ಗ್ರಾಂ ತೊಗರಿಬೇಳೆಯುಳ್ಳ ಬಿಸಿಯೂಟ ಹಾಗೂ 6-10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ ಹಾಗೂ 30 ಗ್ರಾಂ ತೊಗರಿಬೇಳೆ ಪ್ರಮಾಣದಲ್ಲಿ ಅನ್ನ ಸಂಬಾರು ನೀಡಲಾಗುತ್ತಿತ್ತು. ಆದರೆ, 1-5ನೇ ತರಗತಿಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸಿಗದಂತಾಗಿದೆ.

ಸ್ಥಗಿತಕ್ಕೆ ಕಾರಣವೇನು?: ಶಾಲೆಗಳಿಗೆ ಪಡಿತರ ಹಂಚಿಕೆ ಮಾಡಲು ಕೆಎಫ್​ಸಿಎಸ್​ಸಿಗೆ ಜವಾಬ್ದಾರಿ ವಹಿಸಲಾಗಿದೆ. ಮುಂದಿನ 5 ತಿಂಗಳು ಅಕ್ಕಿ, ಗೋಧಿ ಜತೆ ಉಪು್ಪ, ಅಡುಗೆ ಎಣ್ಣೆ ಹಾಗೂ ತೊಗರಿಬೇಳೆ ವಿತರಿಸ ಲಾಗುತ್ತದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಕೆಎಫ್​ಸಿಎಸ್​ಸಿ ಎಂಡಿ ಟೆಂಡರ್ ಕರೆಯಲು ಮೀನಮೇಷ ಎಣಿಸುತ್ತಿದ್ದಾರೆ. ಪ್ರತಿ ಲೀಟರ್ ಅಡುಗೆ ಎಣ್ಣೆಗೆ 140 ರೂ.ನಿಂದ 150 ರೂ.ಗೆ ವಿತರಿಸಲು ಕಂಪನಿಗಳು ಆಸಕ್ತಿ ತೋರಿದ್ದರೂ ಈವರೆಗೆ ಟೆಂಡರ್ ನಡೆದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

54 ಲಕ್ಷ ವಿದ್ಯಾರ್ಥಿಗಳು: ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿಯ ಅಂದಾಜು 54 ಲಕ್ಷ ವಿದ್ಯಾರ್ಥಿಗಳು ಬಿಸಿಯೂಟದ ಫಲಾನುಭವಿಗಳಾಗಿದ್ದಾರೆ.

ಅಕ್ಕಿ, ಗೋಧಿ ಸರಬರಾಜು ಆಗಿದೆ. ಆದರೆ, ಅಡುಗೆ ಎಣ್ಣೆ, ಉಪ್ಪು, ಹಾಗೂ ತೊಗರಿಬೇಳೆ ವಿತರಣೆ ಆಗಿಲ್ಲ. ಟೆಂಡರ್ ನಡೆಸದ ಹಿನ್ನೆಲೆಯಲ್ಲಿ ಈವರೆಗೆ ಧಾನ್ಯಗಳು ಹಂಚಿಕೆ ಆಗಿಲ್ಲ.

| ಟಿ.ನಾರಾಯಣಗೌಡ ಜಂಟಿ ನಿರ್ದೇಶಕರು, ಮಧ್ಯಾಹ್ನ ಉಪಯೋಜನೆ

ಕ್ಷೀರಭಾಗ್ಯವೂ ಬಂದ್: ಕರೊನಾದಿಂದ ಸ್ಥಗಿತಗೊಂಡಿರುವ ಕ್ಷೀರಭಾಗ್ಯ ಯೋಜನೆಯೂ ಆರಂಭವಾಗಿಲ್ಲ. ಯೋಜನೆ ಎಂದಿನಿಂದ ಪುನರಾರಂಭವಾಗುತ್ತದೆ ಎಂಬುದರ ಸ್ಪಷ್ಟತೆಯೂ ಇಲ್ಲ.