ನ್ಯೂಸ್

ಲಾಂಗ್ ಮಚ್ಚು ಹಿಡಿದು ಬರ್ತ್​ಡೇ ಪಾರ್ಟಿ ಆಚರಿಸಿ, ಸೆಲ್ಫೀನೂ ತಗೊಂಡು ಫೇಸ್​ಬುಕ್​ಗೆ ಅಪ್ಲೋಡ್ ಮಾಡಿದ್ರು!: ನಂತರ ನಡೆದುದು ಟ್ರಾಜೆಡಿ..

lakshmihegde

ಬೆಂಗಳೂರು: ಬರ್ತ್​ಡೇ ಪಾರ್ಟಿ ವಿಭಿನ್ನವಾಗಿ ಆಚರಿಸಬೇಕು, ಆದರೆ ಹೇಗೆ ಎಂದು ಆಲೋಚಿಸುತ್ತ ಮನಸಿಗೆ ತೋಚಿದಂತೆ ಆಚರಿಸಿ ತೊಂದರೆಗೆ ಸಿಲುಕುತ್ತಿರುವವರ ಸಂಖ್ಯೆಯೂ ಕಡಿಮೆ ಏನಲ್ಲ. ಅಂಥದ್ದೇ ಒಂದು ಕರುಣಾಜನಕ ಕಥೆ ಇದು..

ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದ ನೈಜ ಘಟನೆ ಇದು. ಸುರೇಶ್​, ನದೀಂ, ರಾಜೇಶ್​ ಹಾಗೂ ಹನುಮಂತು ಎಂಬ ನಾಲ್ವರು ಗೆಳೆಯರು ಈ ಘಟನೆಯ ಕೇಂದ್ರ ಬಿಂದುಗಳು. ಗೆಳೆಯನ ಹುಟ್ಟುಹಬ್ಬ ಆಚರಣೆಗೆಂದು ಸೇರಿದವರು ಬಿಯರ್ ಕುಡಿದು, ನಾನ್​ವೆಜ್​ ಊಟ ಉಂಡರು. ಅಷ್ಟೇ ಸಾಲದು ಎಂಬಂತೆ ಲಾಂಗ್ ಹಿಡಿದು ಒಂದು ಸೆಲ್ಫಿಯನ್ನೂ ತಗೊಂಡ್ರು. ಅಷ್ಟಕ್ಕೇ ಸುಮ್ಮನಾಗದ ಈ ಗೆಳೆಯರು ಆ ಸೆಲ್ಫಿಯನ್ನು ಹೆಮ್ಮೆಯಿಂದ ಫೇಸ್​ಬುಕ್​​ನಲ್ಲೂ ಅಪ್ಲೋಡ್ ಮಾಡಿ ಅದು ವೈರಲ್ ಆಗುತ್ತಿರುವುದು ನೋಡಿ ಕೆ.ಆರ್.ಪುರದಲ್ಲಿ ತಮ್ಮ ಹವಾ ಜೋರಾಗಿದೆ ಎಂದು ಖುಷಿಪಟ್ಟರು.

ಅವರ ಖುಷಿಗೆ ಮಿತಿಯೇ ಇರಲಿಲ್ಲ. ಆದರೆ, ಆ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಈ ಪೋಸ್ಟ್ ಪೊಲೀಸರ ಗಮನಕ್ಕೂ ಬಂತು. ಈ ಗೆಳೆಯರು ರೌಡಿಶೀಟರ್​ಗಳು ಎಂಬುದು ಮನವರಿಕೆ ಆದ ಕೂಡಲೇ ಕಾರ್ಯಪ್ರವೃತ್ತರಾದ ಕೆ.ಆರ್​.ಪುರ ಪೊಲೀಸರು ಇವರ ಬಂಧನಕ್ಕೆ ಜಾಲ ಹೆಣೆದರು. ಆ ಬಲೆಗೆ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಈ ಗೆಳೆಯರು ಬಿದ್ದರು.

ಬಂಧಿತರ ಮೇಲೆ ಹಲವು ಪ್ರಕರಣಗಳು ಇರುವುದು ಪತ್ತೆಯಾಗಿದೆ. ಈ ನಾಲ್ವರು ರೌಡಿಶೀಟರ್​ಗಳು ಕೆಆರ್​ಪುರದಲ್ಲಿ ಹವಾ ಸೃಷ್ಟಿಸಲು ಸೆಲ್ಫಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾರು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)