ನ್ಯೂಸ್

ಜನನ ಪ್ರಮಾಣ ಇಳಿಕೆ, ಜನಸಂಖ್ಯಾ ಬೆಳವಣಿಗೆ ದರ ಸ್ಥಿರ: ದೇಶದಲ್ಲಿ ಇದೇ ಮೊದಲ ಸಲ ಜನನ ಪ್ರಮಾಣ ನಿಯಂತ್ರಣದಲ್ಲಿ, ಕರ್ನಾಟಕ ಟಾಪ್ 5

Webdesk - Ravikanth

ನವದೆಹಲಿ: ದೇಶದಲ್ಲಿ ಜನನ ಪ್ರಮಾಣ ದರ ಇದೇ ಮೊದಲ ಬಾರಿಗೆ 2.1 ಕ್ಕಿಂತ ಕೆಳಕ್ಕೆ ಜಾರಿದೆ. ಇದು ಜನ ಸಂಖ್ಯಾಬೆಳವಣಿಗೆ ಸ್ಥಿರವಾಗಿರುವುದರ ಸಂಕೇತ ಎಂಬ ಅಂಶದ ಕಡೆಗೆ 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್​ಎಫ್​ಎಚ್​ಎಸ್-5)ಯ ವರದಿ ಬೆಳಕು ಚೆಲ್ಲಿದೆ. ಪ್ರಕಟವಾಗಿರುವ ಡೇಟಾ ಪ್ರಕಾರ, 2015-16ರಲ್ಲಿ ಪ್ರತಿ ಮಹಿಳೆಗೆ ಸರಾಸರಿ 2.2 ಮಕ್ಕಳಿದ್ದರೆ, ಈಗ ಅದು 2ಕ್ಕೆ ಇಳಿಕೆಯಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳಲ್ಲಿ ಈ ರೀತಿ ಆಗಿಲ್ಲ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಧುನಿಕ ಗರ್ಭ ನಿರೋಧಕ ವಿಧಾನಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ ಎಂಬ ಅಂಶವೂ ವರದಿಯಲ್ಲಿದೆ.

ವರದಿಯಲ್ಲಿ ಏನಿದೆ?

  • ರಾಷ್ಟ್ರಮಟ್ಟದಲ್ಲಿ ಒಟ್ಟು ಜನನ ಪ್ರಮಾಣ ದರ (ಟೋಟಲ್ ಫರ್ಟಿಲಿಟಿ ರೇಟ್ಸ್ -ಟಿಎಫ್​ಆರ್)ವು ಪ್ರತಿ ಮಹಿಳೆಗೆ ಸರಾಸರಿ 2.2 ಮಕ್ಕಳ ಪ್ರಮಾಣ 2ಕ್ಕೆ ಇಳಿಕೆಯಾಗಿದೆ. ಇನ್ನು ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಲೆಕ್ಕ ತೆಗೆದುಕೊಂಡರೆ ಈ ದರವು ಚಂಡೀಗಢದಲ್ಲಿ ಕನಿಷ್ಠ 1.4ರಿಂದ ಉತ್ತರ ಪ್ರದೇಶದಲ್ಲಿ ಗರಿಷ್ಠ 2.4ರ ತನಕ ಇದೆ. ಎಲ್ಲ ಹಂತ -2ರ ರಾಜ್ಯಗಳು ಸ್ಥಿರ ಜನನ ಪ್ರಮಾಣದ 2.1 ಅನ್ನು ಕಾಪಾಡಿಕೊಂಡಿವೆ. ಇದರಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಹೊರತಾಗಿವೆ.
  • ಅಖಿಲ ಭಾರತ ಮಟ್ಟದಲ್ಲಿ ಒಟ್ಟಾರೆ ಗರ್ಭನಿರೋಧಕ ಬಳಕೆ ಪ್ರಮಾಣ ಇದಕ್ಕೆ ಪೂರಕವಾಗಿ ಶೇಕಡ 54ರಿಂದ ಶೇಕಡ 67ಕ್ಕೆ ಏರಿದೆ. ಎಲ್ಲ ಹಂತ -2ರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ (ಪಂಜಾಬ್ ಹೊರತು) ಇದೇ ಪ್ರಮಾಣ ದಾಖಲಾಗಿದೆ. ಆಧುನಿಕ ಗರ್ಭ ನಿರೋಧಕ ವಿಧಾನಗಳ ಬಳಕೆಯೂ ಹೆಚ್ಚಾಗಿದೆ.
  • ರಾಷ್ಟ್ರಮಟ್ಟದಲ್ಲಿ ಕುಟುಂಬ ಯೋಜನೆಯ ಅಗತ್ಯಗಳು ಪೂರೈಕೆಯಾಗದ ಕಾರಣ ಇದರ ಅನುಷ್ಠಾನ ಪ್ರಮಾಣ ಶೇಕಡ 13ರಿಂದ ಶೇಕಡ 9ಕ್ಕೆ ಇಳಿಕೆಯಾಗಿದೆ. ಜಾರ್ಖಂಡ್ (12%), ಅರುಣಾಚಲ ಪ್ರದೇಶ (13%), ಉತ್ತರ ಪ್ರದೇಶ (13%) ಇದ್ದು, ಉಳಿದವುಗಳ ದರ ಶೇಕಡ 10ಕ್ಕಿಂತ ಕಡಿಮೆ ಇವೆ.
  • ದೇಶ ಮಟ್ಟದಲ್ಲಿ ಮೊದಲ ಹಂತದಲ್ಲಿ 12ರಿಂದ 23 ತಿಂಗಳ ಮಕ್ಕಳ ಪೂರ್ಣ ಪ್ರಮಾಣದ ಪ್ರತಿರಕ್ಷಣಾ ಅಭಿಯಾನವು ಶೇಕಡ 62ರಿಂದ ಶೇಕಡ 76ಕ್ಕೆ ಏರಿಕೆಯಾಗಿದೆ. 14 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 12-23 ತಿಂಗಳ ಮಕ್ಕಳಲ್ಲಿ ಶೇಕಡ 75ಮಕ್ಕಳಿಗೆ ಪೂರ್ಣ ಪ್ರಮಾಣದ ಲಸಿಕೆ ಆಗಿದೆ. ಇದರಲ್ಲಿ ಒಡಿಶಾದಲ್ಲಿ ಗರಿಷ್ಠ ಶೇಕಡ 90 ಮಕ್ಕಳಿಗೆ ಲಸಿಕೆ ಆಗಿದೆ.
  • ಆಸ್ಪತ್ರೆಗಳಲ್ಲಿ ವೈದ್ಯರ ಸಹಾಯದೊಂದಿಗೆ ಆಗುವ ಪ್ರಸವ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಮೊದಲ ಹಂತದಲ್ಲಿ ಶೇಕಡ 79ರಿಂದ ಶೇಕಡ 89ಕ್ಕೆ ಏರಿಕೆಯಾಗಿದೆ. ಪುದುಚೆರಿ, ತಮಿಳುನಾಡುಗಳಲ್ಲಿ ಆಸ್ಪತ್ರೆಯಲ್ಲಿ ಮಕ್ಕಳ ಜನನ ಪ್ರಮಾಣ ಶೇಕಡ 100 ಸಾಧನೆ ಮಾಡಿದೆ. ಇನ್ನುಳಿದಂತೆ ಎರಡನೇ ಹಂತದ 12 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ 7 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಶೇಕಡ 90ಕ್ಕಿಂತ ಹೆಚ್ಚು ಸಾಧನೆ ಮಾಡಿವೆ.