ನ್ಯೂಸ್

ಭಾರತದ ಫುಟ್‌ಬಾಲ್‌ ಲೆಜೆಂಡ್​ ಒಲಿಂಪಿಯನ್ ಎಂ ಕೆಂಪಯ್ಯರ ಜೀವನ ಚರಿತ್ರೆ ಬಿಡುಗಡೆ

ಏಷ್ಯನ್ ಫುಟ್‌ಬಾಲ್ ಕಾನ್ಫಿಡೆರೇಷನ್ ಪ್ರಧಾನ ಕಾರ್ಯದರ್ಶಿ ದಾತುಕ್ ಸೆರಿ ವಿಂಡ್ಸರ್ ಜಾನ್ ಅವರಿಂದ ಶ್ರೀ ಕೆಂಪಯ್ಯ ಅವರ ಸ್ಪೂರ್ತಿದಾಯಕ "ಒಲಿಂಪಿಯನ್ ಎಂ ಕೆಂಪಯ್ಯ - ಭಾರತೀಯ ಫುಟ್‌ಬಾಲ್‌ನ ಲೆಜೆಂಡರಿ ಮಿಡ್‌ಫೀಲ್ಡರ್" ಜೀವನ ಚರಿತ್ರೆ ಪುಸ್ತಕ ಬಿಡುಗಡೆಯಾಯಿತು.

ಪ್ರಸಕ್ತ ಕತಾರ್​ನಲ್ಲಿ ನಡೆಯುತ್ತಿರುವ ಏಷ್ಯನ್ ಫುಟ್‌ಬಾಲ್ ಕಪ್ (AFC) ಪಂದ್ಯಾವಳಿಯ ಸಂದರ್ಭದಲ್ಲಿ, ಸಮುದಾಯದ ಸದಸ್ಯರು, ಮುಖಂಡರು ಮತ್ತು ಸುದ್ದಿ/ಮಾಧ್ಯಮ ವ್ಯಕ್ತಿಗಳ ಉಪಸ್ಥಿತಿಯಲ್ಲಿ ದೋಹಾದ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಪುಸ್ತಕವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು.

ಎಂ.ಕೆಂಪಯ್ಯ ಅವರ ಮೊಮ್ಮಕ್ಕಳಾದ ದಿಯಾ ಮಹೇಶ್ ಗೌಡ ಮತ್ತು ರುಚಿತಾ ಚಂದ್ರಶೇಖರ್ ಅತಿಥಿಗಳನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಏಷ್ಯನ್ ಫುಟ್ಬಾಲ್ ಕಾನ್ಫಿಡೆರೇಷನ್​ನ ಪ್ರಧಾನ ಕಾರ್ಯದರ್ಶಿ ದಾತುಕ್ ಸೆರಿ ವಿಂಡ್ಸರ್ ಜಾನ್ ಮಾತನಾಡಿ, “ಕೆಂಪಯ್ಯ ಅವರು ಕೇವಲ ಭಾರತೀಯ ಫುಟ್‌ಬಾಲ್‌ನಲ್ಲಿ ಮಾತ್ರವಲ್ಲದೆ ಏಷ್ಯಾದಾದ್ಯಂತ ಅಪ್ರತಿಮ ವ್ಯಕ್ತಿಯಾಗಿದ್ದಾರೆ. ಕೆಂಪಯ್ಯ ಅವರು ಭಾರತ ಮತ್ತು ಮಲೇಷ್ಯಾ (ಡಾಟುಕ್ ಅವರ ಸ್ವದೇಶ) ಈ ಎರಡು ರಾಷ್ಟ್ರಗಳ ಸುವರ್ಣ ಯುಗದ ಸಮಯದಲ್ಲಿ ಆಡಿದವರು. ಭಾರತೀಯ ರಾಷ್ಟ್ರೀಯ ತಂಡದ ಭಾಗವಾಗಿದ್ದರು ಮತ್ತು 1959ರಲ್ಲಿ ಮೆರ್ಡೆಕಾ ಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಆಡಿ ಎರಡನೇ ಸ್ಥಾನ ಪಡೆದರು. 18ನೇ ಎಎಫ್‌ಸಿ ಕಪ್ ನಡೆಯುತ್ತಿರುವ ಈ ಸುಸಂದರ್ಭದಲ್ಲಿ, ಅವರ ಮಗಳು ಬರೆದ ಈ ಜೀವನಚರಿತ್ರೆಯನ್ನು ಬಿಡುಗಡೆ ಮಾಡುತ್ತಿರುವುದು ನನಗೆ ತುಂಬಾ ಸಂತಸದ ವಿಷಯ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಎಎಫ್‌ಸಿಯ ಪ್ರಧಾನ ಕಾರ್ಯದರ್ಶಿ ಡಾಟುಕ್ ಸೆರಿ ವಿಂಡ್ಸರ್ ಜಾನ್ ಅವರು ತಮ್ಮ ಮೆಚ್ಚುಗೆಯ ಸಂಕೇತವಾಗಿ ಎಎಫ್‌ಸಿಯಿಂದ ಅಧಿಕೃತ ಫುಟ್‌ಬಾಲ್ ಅನ್ನು ಪ್ರಸ್ತುತಪಡಿಸಿದರು, ಇದನ್ನು ಕುಟುಂಬದ ಸಮ್ಮುಖದಲ್ಲಿ ಶ್ರೀ ಕೆಂಪಯ್ಯನವರ ಮೊಮ್ಮಗ ಅರ್ಜುನ್ ಮಹೇಶ್ ಗೌಡ ಅವರು ಸ್ವೀಕರಿಸಿದರು.

ಈ ಜೀವನಚರಿತ್ರೆಯ ಲೇಖಕಿ ಸುಮಾ ಮಹೇಶ್ ಗೌಡ ಅವರು ಕತಾರ್‌ನಲ್ಲಿ ಪ್ರಖ್ಯಾತ ಸಮುದಾಯದ ನಾಯಕರಾಗಿದ್ದಾರೆ ಮತ್ತು ಪ್ರಸ್ತುತ ಕತಾರ್ ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಸಿ) ಸಾಂಸ್ಕೃತಿಕ ಘಟಕದ ಮುಖ್ಯಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಬಹುಮುಖ ಪ್ರತಿಭೆ, ಕ್ರೀಡಾ ಉತ್ಸಾಹಿಯೂ ಹೌದು. ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲಾ ಅತಿಥಿಗಳಿಗೆ ತಮ್ಮ ವೈಯಕ್ತಿಕವಾಗಿ ಹಸ್ತಾಕ್ಷರ ಮಾಡಿದ ಪುಸ್ತಕದ ಮೊದಲ ಪ್ರತಿಗಳನ್ನು ವಿತರಿಸಿದರು.

ಭಾರತೀಯ ಕ್ರೀಡಾ ಕೇಂದ್ರ ಕತಾರ್‌ನ ಅಧ್ಯಕ್ಷರಾದ ಶ್ರೀ ಇಪಿ ಅಬ್ದುಲ್ ರಹಮಾನ್ ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಹಿಂದಿನ ಅಧ್ಯಕ್ಷರಾದ ಶ್ರೀ ಪಿಎನ್ ಬಾಬುರಾಜನ್ ಅವರು ಬಿಡುಗಡೆ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿದ್ದ ಪ್ರಸಿದ್ಧ ಕ್ರೀಡಾ ಸಂಪಾದಕರು ಮತ್ತು ಮಾಧ್ಯಮ ಸಲಹೆಗಾರರಾದ ಶ್ರೀ. ರವಿಕುಮಾರ್ ಅವರು ಎಂ ಕೆಂಪಯ್ಯ ಅವರ ಫಿಟ್‌ನೆಸ್‌ನ ಕುರಿತು ಕೆಲವು ಉಪಾಖ್ಯಾನಗಳು ಹಾಗೂ ಅವರೊಂದಿಗಿನ ಸಂದರ್ಶನದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಸಂಪಾದಕರು ಮತ್ತು ಪುಸ್ತಕದ ಕನ್ನಡ ಅನುವಾದಕರಾದ ಸಹಾಯಕ ಪ್ರೊಫೆಸರ್ ಶಶಿ ಕುಮಾರ್, ಕೆಂಪಯ್ಯ ಅವರಂತಹ ದಂತಕಥೆಗಳು ಏಕೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯಬೇಕು ಎಂಬುದರ ಬಗ್ಗೆ ತಮ್ಮ ಅನಿಸಕೆಗಳನ್ನು ಸಭಗೆ ತಿಳಿಸಿದರು.

ಶ್ರೀ ಕೆಂಪಯ್ಯನವರ ಮೊದಲ ಪುತ್ರಿ ಶ್ರೀಮತಿ ಮಂಜುಳಾ ಚಂದ್ರಶೇಖರ್, ಅವರ ಮಗ ಶ್ರೀನಿವಾಸ ಕೆಂಪಯ್ಯ, ಅಳಿಯ ಮಹೇಶ್ ಗೌಡ ಮತ್ತು ಅವರ ಮೊಮ್ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಭಿಕರನ್ನುದ್ದೇಶಿಸಿ ಮಾತನಾಡಿದರು. ಗ್ಯಾಲರಿ ಇಂಟರ್‌ನ್ಯಾಶನಲ್‌ನ ಶ್ರೀ ಹಬೀಬ್ ಸೈಯದ್ ಸಂಸ್ಥಾಪಕರು ಅವರ ಕ್ರೀಡೆ, ವಿಶೇಷವಾಗಿ ಫುಟ್‌ಬಾಲ್‌ನ ಅಭಿಮಾನದ ಸಂಕೇತವಾಗಿ ಶ್ರೀ ಎಂ ಕೆಂಪಯ್ಯನವರ ಜೀವನ ಗಾತ್ರದ ಭಾವಚಿತ್ರವನ್ನು ಕುಟುಂಬ ಸದಸ್ಯರಿಗೆ ಪ್ರಸ್ತುತಪಡಿಸಿದರು.

ಜನವರಿ 26ರಂದು ಕತಾರ್ ದೇಶಕ್ಕೆ ಏಷ್ಯನ್ ಫುಟ್‌ಬಾಲ್ ಕಪ್ (AFC) ಪಂದ್ಯಾವಳಿಗಾಗಿ ಆಗಮಿಸಿದ್ದ ಭಾರತ ತಂಡಕ್ಕೆ ಭಾರತೀಯ ರಾಯಭಾರಿಯವರು ಹಮ್ಮಿಕೊಂಡಿದ್ದ ಔತಣಕೂಟದಲ್ಲಿ ಸನ್ಮಾನ ಸಮಾರಂಭದಲ್ಲಿ ಭಾರತೀಯ ಫುಟ್ಬಾಲ್ ತಂಡದ ನಾಯಕರದ ಶ್ರೀ ಸುನಿಲ್ ಶೆಟ್ಟಿ ಮತ್ತು ಕೋಚ್ ಇಗೊರ್ ಸ್ಟಿಮ್ಯಾಕ್ ರವರು ಒಲಂಪಿಯನ್ ಕೆಂಪಯ್ಯನವರ ಜೀವನ ಚರಿತ್ರೆ ಪುಸ್ತಕವನ್ನು ಪೂರ್ವ ಬಿಡುಗಡೆ ಮಾಡಿದರು.