Commonwealth Games: ವೇಯ್ಟ್​ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿಗೆ ಕಂಚು; ಭಾರತಕ್ಕೆ ಆರನೇ ಪದಕ 
ನ್ಯೂಸ್

Commonwealth Games: ವೇಯ್ಟ್​ಲಿಫ್ಟಿಂಗ್​ನಲ್ಲಿ ಬಿಂದ್ಯಾರಾಣಿಗೆ ಕಂಚು; ಭಾರತಕ್ಕೆ ಆರನೇ ಪದಕ

ಗ್ಲಾಸ್ಗೋ: ಮಣಿಪುರದ ಬಿಂದ್ಯಾರಾಣಿ ದೇವಿ ಕಾಮನ್ವೆಲ್ತ್ ಗೇಮ್ಸ್​ (Commonwealth Games) ವೇಯ್ಟ್​ಲಿಫ್ಟಿಂಗ್​​ನ ಮಹಿಳೆಯರ 58 ಕೆಜಿ ವಿಭಾಗದಲ್ಲಿ ಒಟ್ಟು ಕೆಜಿ 199 (87+112) ಭಾರ ಎತ್ತುವ ಮೂಲಕ ಕಂಚಿನ ಪದಕ ಒಲಿಸಿಕೊಂಡರು. ಇದರೊಂದಿಗೆ ಕೂಟದಲ್ಲಿ ಭಾರತ ಇದುವರೆಗೆ 1 ಚಿನ್ನ, 3 ಬೆಳ್ಳಿ, 2 ಕಂಚು ಸಹಿತ ಒಟ್ಟು 6 ಪದಕಗಳನ್ನು ಒಲಿಸಿಕೊಂಡಿದ್ದು, ಪದಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಸೋಮವಾರ ರಾತ್ರಿ ನಡೆದ ಸ್ಪರ್ಧೆಯ ಸ್ಯಾಚ್​ನಲ್ಲಿ ಕ್ರಮವಾಗಿ 83, 85, 87 ಕೆಜಿ ಭಾರ ಎತ್ತಿದ ಅವರು, ಕ್ಲೀನ್​ ಆಂಡ್​ ಜರ್ಕ್​ನ ಮೊದಲ ಯತ್ನದಲ್ಲಿ 110 ಕೆಜಿ ಎತ್ತುವಾಗ ಫೌಲ್​ ಮಾಡಿದರು. ಬಳಿಕ 112 ಕೆಜಿ ಭಾರವನ್ನು ಎತ್ತಿ ಕಂಚು ಒಲಿಸಿಕೊಂಡರು. ನೈಜೀರಿಯಾದ ರಫಿಯತು ಲವಲ (229: 103+126) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಕೆನಡಾದ ಆನ್​ ಸೋಫಿ (215: 94+121) ಬೆಳ್ಳಿ ಪಡೆದರು.
ಪದಕ ಸುತ್ತಿಗೆ ಶ್ರೀಶಂಕರ್​, ಕನ್ನಡಿಗ ಲೋಕೇಶ್​
ಮುರಳಿ ಶ್ರೀಶಂಕರ್​ ಮತ್ತು ಕನ್ನಡಿಗ ಲೋಕೇಶ್​ ಸತ್ಯನಾಥನ್​ ಸೋಮವಾರ ಆರಂಭಗೊಂಡ ಅಥ್ಲೆಟಿಕ್ಸ್​ ಸ್ಪರ್ಧೆಯ ಪುರುಷರ ಲಾಂಗ್​ಜಂಪ್​ ವಿಭಾಗದಲ್ಲಿ ಅಗ್ರ 12 ಸ್ಪರ್ಧಿಗಳ ಫೈನಲ್​ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಕಣಕ್ಕಿಳಿದ ಶ್ರೀಶಂಕರ್​ 8.01 ಮೀ. ದೂರ ಹಾರಿ ನೇರವಾಗಿ ಫೈನಲ್​ ಪ್ರವೇಶಿಸಿದರು. 27 ವರ್ಷದ ಶ್ರೀಶಂಕರ್​ 2022ರ ಆವೃತ್ತಿಯಲ್ಲಿ ಬೆಳ್ಳಿ ಜಯಿಸಿದ್ದರು. ಬಿ ಗುಂಪಿನಲ್ಲಿ ಕಣಕ್ಕಿಳಿದ ಬೆಂಗಳೂರಿನ ಲೋಕೇಶ್​ 7.77 ಮೀ. ಹಾರಿದರು. ಈ ಮೂಲಕ ಒಟ್ಟಾರೆ 7ನೇ ಸ್ಥಾನಿಯಾಗಿ ಫೈನಲ್​ ಪ್ರವೇಶಿಸಿದರು. ಎರಡೂ ಗುಂಪಿನ ಸ್ಪರ್ಧೆಯ ಬಳಿಕ ಶ್ರೀಶಂಕರ್​ 3ನೇ ಸ್ಥಾನ ಗಳಿಸಿದರು. ಅವರು ಹಾಲಿ ಋತುವಿನಲ್ಲಿ 8.38 ಮೀ. ಹಾರಿದ ದಾಖಲೆ ಹೊಂದಿದ್ದಾರೆ. ಬುಧವಾರ ಫೈನಲ್​ ನಡೆಯಲಿದೆ.
ಹರ್ಡಲ್ಸ್ ಫೈನಲ್​ಗೆ ತೇಜಸ್​
ರಾಷ್ಟ್ರೀಯ ದಾಖಲೆ ವೀರ ತೇಜಸ್​ ಶಿರ್ಸೆ ಪುರುಷರ 110 ಮೀ. ಹರ್ಡಲ್ಸ್​ನಲ್ಲಿ ಫೈನಲ್​ ಪ್ರವೇಶಿಸಿದರು. ಅವರು ಕಾಮನ್ವೆಲ್ತ್​ ಗೇಮ್ಸ್​ನ ಈ ವಿಭಾಗದಲ್ಲಿ ಪದಕ ಸುತ್ತಿಗೇರಿದ ಮೊದಲ ಭಾರತೀಯರೆನಿಸಿದರು. 24 ವರ್ಷದ ತೇಜಸ್​ ಹೀಟ್ಸ್​&1ರಲ್ಲಿ 13.76 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ 3ನೇ ಸ್ಥಾನ ಪಡೆದರು. ಒಟ್ಟಾರೆಯಾಗಿ 6ನೇ ಸ್ಥಾನದೊಂದಿಗೆ ಫೈನಲ್​ಗೇರಿದರು.
ಗುರಿಂದರ್​ ಫೈನಲ್​ಗೇರಲು ವಿಫಲ
ಪುರುಷರ 100 ಮೀ. ಓಟದಲ್ಲಿ ಭಾರತದ ವೇಗದ ಓಟಗಾರ ಗುರಿಂದರ್​ವೀರ್​ ಸಿಂಗ್​ ಹೀಟ್ಸ್​ನಲ್ಲಿ 2ನೇ ಸ್ಥಾನ ಪಡೆದರೂ, ಸೆಮಿಫೈನಲ್​ಗೇರಲು ವಿಲರಾದರು. 10.39 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದ ಅವರು ಒಟ್ಟಾರೆ 28ನೇ ಸ್ಥಾನಕ್ಕೆ ತೃಪ್ತಿಪಟ್ಟರು. 10 ಸೆಕೆಂಡ್​ನೊಳಗೆ 100 ಮೀ. ಓಡಿದ ಮೊದಲ ಭಾರತೀಯ ಎನಿಸುವ ಹೆಬ್ಬಯಕೆಯೊಂದಿಗೆ ಗ್ಲಾಸ್ಗೋಗೆ ತೆರಳಿದ್ದ 25 ವರ್ಷದ ಗುರಿಂದರ್​ ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾದರು.