Akhilesh Yadav: ಕೇಂದ್ರ ಸರ್ಕಾರ ತರಲೊರಟಿರುವ ಪಿಎಂ, ಸಿಎಂ ಪದಚ್ಯುತ ಮಸೂದೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾವ್, ವಿರೋಧ ಪಕ್ಷದ ನಾಯಕರಿಕ ಕಿರುಕುಳ ನೀಡಲು, ಪ್ರಾದೇಶಿಕ ಪಕ್ಷಗಳ ಮೇಲೆ ಒತ್ತಡ ಹೇರಲು ಹಾಗೂ ಅವರೊಳಗೆ ದಂಗೆಗಳನ್ನು ಸೃಷ್ಟಿಸಲು ಈ ಮಸೂದೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಲಖೌನ್ದಲ್ಲಿ ಮಾತನಾಡಿರುವ ಅವರು, ಗಂಭೀರ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಬಂಧನದಲ್ಲಿರುವ ಪ್ರಧಾನಿ, ಸಿಎಂ ಅಥವಾ ಸಚಿವರನ್ನು ಅನರ್ಹಗೊಳಿಸಲು ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆ ರಾಜಕೀಯ ಪ್ರೇರಿತವಾಗಿದೆ. ಚುನಾವಣೆಗಳ ಸಮಯದಲ್ಲಿ ಬಿಜೆಪಿ ಹೇಗೆ ಮತಗಳ್ಳತನ ಮಾಡುತ್ತೆ ಎಂಬ ಚರ್ಚೆಯನ್ನು ಮರೆಮಾಚಲು, ಜನರ ಗಮನವನ್ನು ಬೇರೆಡೆ ಸೆಳೆಯಲು, ಉದ್ದೇಶಪೂರ್ವಕವಾಗಿ ಈ ಮಸೂದೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ತನ್ನದೇ ಪಕ್ಷದ ನಾಯಕರ ವಿರುದ್ಧದ ಕ್ರಿಮಿನಲ್ ಕೇಸ್ಗಳನ್ನು ವಾಪಸ್ ಪಡೆಯುತ್ತದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಕಾನೂನು ಕ್ರಮಕೈಗೊಳ್ಳುತ್ತದೆ. ನಮ್ಮ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಇಂತಹ ದಿನ ಬರುತ್ತೆ ಎಂದು ತಿಳಿದಿದ್ದರಿಂದ ತಮ್ಮ ವಿರುದ್ದದ ಕೇಸ್ಗಳನ್ನು ವಾಪಸ್ ತೆಗೆದುಕೊಂಡರು. ಡಿಸಿಎಂ ಮೇಲಿದ್ದ ಕೇಸ್ಗಳನ್ನು ಸಹ ವಾಪಸ್ ತೆಗದುಕೊಳ್ಳಲಾಗಿದೆ. ಈ ಮಸೂದೆ ತಂದವರೇ ತಮ್ಮ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಅಂತ ಹೇಳಿದ್ದಾರೆ. ಅಂತಹದ್ದರಲ್ಲಿ ನಾಳೆ ಬೇರೆಯವರ ಮೇಲೆ ಸುಳ್ಳು ಕೇಸ್ ದಾಖಲಿಸುವುದಿಲ್ಲ ಎನ್ನುವುದಕ್ಕೆ ಏನೂ ಗ್ಯಾರಂಟಿ ಕಿಡಿಕಾರಿದರು.
ನಮ್ಮ ಪಕ್ಷದ ಮೊಹಮ್ಮದ್ ಅಜಂ ಖಾನ್, ಮಾಜಿ ಸಚಿವ ಗಾಯತ್ರಿ ಪ್ರಜಾಪತಿ, ಶಾಸಕ ಇರ್ಫಾನ್ ಸೋಲಂಕಿ, ಮಾಜಿ ಸಂಸದ ರಮಾಕಾಂತ್ ಯಾದವ್ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿ, ವರ್ಷಗಟ್ಟಲೇ ಜೈಲಿನಲ್ಲಿರುವಂತೆ ಮಾಡಿ, ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನಮ್ಮ ಪಕ್ಷ ಈ ಮಸೂದೆಯನ್ನು ವಿರೋಧಿಸುತ್ತದೆ ಎಂದರು.
ಪಿಎಂ, ಸಿಎಂ ಪದಚ್ಯುತಗೊಳಿಸುವ ಮಸೂದೆ
ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಸತತ 30 ದಿನಗಳ ಕಾಲ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ವಜಾಗೊಳಿಸುವ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಗೆ ವಿರೋಧ ಪಕ್ಷದ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕರಡು ಕಾನೂನಿನ ಪ್ರತಿಗಳನ್ನು ಹರಿದು ಘೋಷಣೆಗಳನ್ನು ಕೂಗುತ್ತಾ ಅಮಿತ್ ಶಾ ಮೇಲೆ ಎಸೆದಿದ್ದರು.
ಸದ್ಯ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025; ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ 2025; ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ (ತಿದ್ದುಪಡಿ) ಮಸೂದೆ 2025 ಈ ಮಸೂದೆಗಳನ್ನು ಲೋಕಸಭೆಯ 21 ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರನ್ನು ಒಳಗೊಂಡ ಜಂಟಿ ಸಂಸತ್ತಿನ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಲಾಗಿದೆ. (ಏಜೆನ್ಸೀಸ್)