ನ್ಯೂಸ್

ಹಿಮ ಪರ್ವತಗಳ ನಡುವೆ ನಿಶ್ಚಿತಾರ್ಥ ಮಾಡಿಕೊಂಡ ಬಿಲ್​ಗೇಟ್ಸ್​ ಮಗಳು: ಕಂಗ್ರಾಟ್ಸ್ ಹೇಳಿದ ಅಪ್ಪ

Mandara

ನ್ಯೂಯಾರ್ಕ್: ಕೋಟ್ಯಧಿಪತಿ ಬಿಲ್​ ಗೇಟ್ಸ್​ನ ಮಗಳು ಹಿಮ ಪವರ್ತಗಳ ನಡುವೆ ತನ್ನ ಸ್ನೇಹಿತನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಮಗಳ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಬಿಲ್​ಗೇಟ್ಸ್​​ ದಂಪತಿ, ಇಬ್ಬರಿಗೂ ಶುಭ ಹಾರೈಸಿದ್ದಾರೆ.


ಬಿಲ್​ಗೇಟ್ಸ್​ರ ಮೊದಲನೇ ಮಗಳು ಜೆನ್ನಿಫರ್​ ಗೇಟ್ಸ್​ ತನ್ನ ಸ್ನೇಹಿತ ನಯೆಲ್​ ನಾಸೆರ್​ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮತ್ತು ತಮ್ಮ ಪ್ರಿಯತಮ ಹಿಮಪರ್ವತಗಳ ನಡುವೆ ಕುಳಿತಿರುವ ಫೋಟೋಗಳನ್ನು ಹಾಕಿದ್ದು, "ಕಳೆದ ವಾರಾಂತ್ಯವನ್ನು ನಮ್ಮಿಬ್ಬರ ಇಷ್ಟದ ಜಾಗದಲ್ಲಿ ಅನೇಕ ಅಚ್ಚರಿಗಳ ಮೂಲಕ ಕಳೆದಿದ್ದೇವೆ. ಇನ್ನುಳಿದ ಜೀವನವನ್ನು ನಿನ್ನ ಜತೆಗೆ ಜೀವಿಸಲು ನಾನು ಬಹಳಷ್ಟು ಉತ್ಸುಕಿಯಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಪ್ರಿಯತಮ ವಜ್ರದ ಉಂಗುರವನ್ನು ತೊಡಿಸಿರುವ ಫೋಟೋವನ್ನು ಆಕೆ ಶೇರ್​ ಮಾಡಿದ್ದು, ಅಭಿಮಾನಿಗಳಿಂದ ಶುಭ ಹಾರೈಕೆಗಳ ಹೊಳೆಯೇ ಹರಿದು ಬಂದಿದೆ.


ಈ ವಿಚಾರವನ್ನು ಇನ್​ಸ್ಟಾಗ್ರಾಂ ಮೂಲಕವೇ ತಿಳಿದುಕೊಂಡ ಬಿಲ್​ಗೇಟ್ಸ್​​ ದಂಪತಿ, ಮಗಳು ಮತ್ತು ಬಾವಿ ಅಳಿಯನ ಬಗ್ಗೆ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. "ಇಬ್ಬರಿಗೂ ಶುಭ ಹಾರೈಕೆಗಳು. ನೀವಿಬ್ಬರೂ ಜತೆಗಿರುವುದನ್ನು ನೋಡಲು ಉತ್ಸುಕಿಯಾಗಿದ್ದೇನೆ" ಎಂದು ಬಿಲ್​ ಗೇಟ್ಸ್​ ಹೇಳಿದ್ದಾರೆ. ಪತ್ನಿ ಮಿಲಿಂದಾ ಗೇಟ್ಸ್​​ ಕೂಡ ಸಂತಸ ವ್ಯಕ್ತ ಪಡಿಸಿದ್ದು, ಶುಭ ಹಾರೈಸಿದ್ದಾರೆ.


ಗೆಳತಿಯೊಂದಿಗೆ ಜೀವನ ನಡೆಸಲು ಮುಂದಾಗಿರುವ ನಯೆಲ್​ ನಾಸೆರ್​ ತಮ್ಮ ನಿಶ್ಚಿತಾರ್ಥದ ಸಂತಸವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೆ ನಾನು ಪ್ರಪಂಚದಲ್ಲೇ ಅತ್ಯಂತ ಲಕ್ಕಿಯೆಸ್ಟ್​ ಪರ್ಸನ್​ ಎನಿಸುತ್ತಿದೆ ಎಂದು ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

29 ವರ್ಷ ವಯಸ್ಸಿನ ನಯೆಲ್​ ನಾಸೆರ್​ ಒಬ್ಬ ರಾವುತನಾಗಿದ್ದು, 2020ರ ಒಲಂಪಿಕ್ಸ್​ನಲ್ಲಿ ಈಜಿಪ್ಟ್​ ಅನ್ನು ಪ್ರತಿನಿಧಿಸಲಿದ್ದಾರೆ. ಜೆನ್ನಿಫರ್​ ಗೇಟ್ಸ್​ ಕೂಡ ಒಬ್ಬ ರಾವುತಳಾಗಿದ್ದು, ಇವರಿಬ್ಬರೂ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ ನ್ಯೂಯಾರ್ಕ್​ನಲ್ಲಿ ಲಿವಿಂಗ್​ ಟುಗೇದರ್​ನಲ್ಲಿದ್ದಾರೆ.

1994ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಬಿಲ್​ ಗೇಟ್ಸ್​ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದು, ಜೆನ್ನಿಫರ್​ ಹಿರಿಯ ಮಗಳಾಗಿದ್ದಾಳೆ. (ಏಜೆನ್ಸೀಸ್​)