ಬಿಲ್ಕಿಸ್ ಬಾನೊ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು. 
ನ್ಯೂಸ್

ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಜಾಮೀನು | Bilkis Bano Case

Bilkis Bano Case: 2002ರ ಗುಜರಾತ್ ಗಲಭೆ ವೇಳೆ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಬ್ಬರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ನ್ಯಾಯಾಲಯ, ವಿಚಾರಣಾ ನ್ಯಾಯಾಲಯ ವಿಧಿಸುವ ಷರತ್ತುಗಳ ಅನ್ವಯ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಪ್ರಸನ್ನ ಬಿ.ವರಾಳೆ ಅವರನ್ನೊಳಗೊಂಡ ಪೀಠ ಅಕ್ಟೋಬರ್ 28ರಂದು ಈ ಆದೇಶ ನೀಡಿದೆ. ಬಿಪಿನ್‌ಚಂದ್ ಕನೈಯಾಲಾಲ್ ಜೋಶಿ ಮತ್ತು ಪ್ರದೀಪ್ ರಾಮನ್‌ಲಾಲ್ ಮೋಧಿಯಾ ಜಾಮೀನು ಪಡೆದಿರುವ ಅಪರಾಧಿಗಳು.

17 ವರ್ಷ ಜೈಲಿನಲ್ಲಿದ್ದ ಅಪರಾಧಿಗಳು

ಇಬ್ಬರೂ 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಅವರಲ್ಲಿ ಒಬ್ಬರು ತೀವ್ರ ದೈಹಿಕ ಅಂಗವೈಕಲ್ಯದಿಂದ ಬಳಲುತ್ತಿರುವುದನ್ನೂ ನ್ಯಾಯಪೀಠ ಗಮನಿಸಿದೆ. ಮತ್ತೊಬ್ಬರ ಹೆಸರು ಆರಂಭದಲ್ಲಿ ಎಫ್‌ಐಆರ್‌ನಲ್ಲಿ ಇರಲಿಲ್ಲ. ಘಟನೆ ನಡೆದ ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಸೇರಿಸಲಾಗಿತ್ತು ಎಂಬ ಅಂಶವನ್ನೂ ಕೋರ್ಟ್ ಉಲ್ಲೇಖಿಸಿದೆ.

2017ರಲ್ಲಿ ಇಬ್ಬರ ಅಪರಾಧ ಸಾಬೀತು

ಬಾಂಬೆ ಹೈಕೋರ್ಟ್ 2017ರಲ್ಲಿ ಇಬ್ಬರ ಅಪರಾಧ ಸಾಬೀತು ಮತ್ತು ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಇಬ್ಬರೂ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಘಟನೆ ನಡೆದ ಸುಮಾರು ಮೂರು ವರ್ಷಗಳ ಬಳಿಕ ತಮ್ಮನ್ನು ಬಂಧಿಸಲಾಗಿತ್ತು. ಆದರೆ, ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದೇವೆ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಇಬ್ಬರು ಸಲ್ಲಿಸಿರುವ ಮೇಲ್ಮನವಿಗಳಲ್ಲಿ ಇನ್ನೂ ಕೆಲವು ಕಾನೂನು ಮತ್ತು ವಾಸ್ತವಾಂಶಗಳಿಗೆ ಸಂಬಂಧಿಸಿದ ವಿಚಾರಗಳು ಪರಿಶೀಲನೆಗೆ ಬಾಕಿ ಇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ, ವಿಚಾರಣಾ ನ್ಯಾಯಾಲಯ ನಿಗದಿಪಡಿಸುವ ಷರತ್ತುಗಳೊಂದಿಗೆ ಇಬ್ಬರಿಗೂ ಜಾಮೀನು ನೀಡಲು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?

2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ವೇಳೆ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದೇ ವೇಳೆ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ: ಯಮುನಾ ನದಿಯಲ್ಲಿ ವಿಷಕಾರಿ ನೊರೆ! ಅದೇ ನೀರಲ್ಲಿ ನಿಂತು ಛತ್ ಪೂಜೆ ಸಲ್ಲಿಸಿದ ಭಕ್ತರು | Yamuna River Toxic Foam

2022ರ ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರದ ಕ್ಷಮಾದಾನ ನೀತಿಯಡಿ ಪ್ರಕರಣದ 11 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, 2024ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ರದ್ದುಗೊಳಿಸಿ, ಎಲ್ಲ 11 ಮಂದಿ ಮತ್ತೆ ಜೈಲು ಸೇರುವಂತೆ ಆದೇಶಿಸಿತ್ತು. ಇದೀಗ ಅವರಲ್ಲಿ ಇಬ್ಬರಿಗೆ ಜಾಮೀನು ಮಂಜೂರು ಮಾಡಿರುವ ಸುಪ್ರೀಂ ಕೋರ್ಟ್ ತೀರ್ಪು ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ. (ಏಜೆನ್ಸೀಸ್​)