ಚಾಮರಾಜನಗರ: ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಳ್ಳುವುದು ಕಾನೂನುಬಾಹಿರ ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಕೆಲವರು ಇನ್ನೂ ಇಂತಹ ಸ್ಟಿಕ್ಕರ್ ಬಳಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಅಂತವರಿಗೆ ಖಾಕಿ ನೋಟಿಸ್ ಕೂಡ ಕಳುಹಿಸುತ್ತಿದೆ. ಪೊಲೀಸ್ ಸ್ಟಿಕ್ಕರ್ ತೆಗೆಸದೆ, ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ಬೈಕ್ ಮಾಲೀಕನಿಗೆ ಜಿಲ್ಲೆಯ ಎಸ್ಪಿ ಡಾ. ಬಿ.ಟಿ.ಕವಿತಾ ನೋಟಿಸ್ ಕೊಟ್ಟು, ಕ್ಷಣಮಾತ್ರದಲ್ಲಿ ದಂಡ ಕಟ್ಟಿಸಿಕೊಂಡಿದ್ದಾರೆ.
ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಹೊಂದಿರುವ ಬೆಂಗಳೂರಿನ ಹೊಸಕೆರಳ್ಳಿಯ ಕೆ. ಚಂದ್ರಶೇಖರ್ ಅವರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಮಾ.12ರಂದು ನಗರದ ಪಟ್ಟಣದ ಸರ್ಕಾರಿ ಬಸ್ ಡಿಪೋ ಎದುರು ನಿಮ್ಮ ಮಾಲೀಕತ್ವದ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ, ಗಾಡಿ ಮೇಲೆ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಸಂಚಾರ ಮಾಡಿರುವುದು ಕಾನೂನು ಬಾಹಿರವಾಗಿದೆ. ಈ ನೋಟಿಸ್ ತಲುಪಿದ ಕೂಡಲೇ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಗೆ ಬಂದು ದಂಡ ಪಾವತಿ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೆ.ಚಂದ್ರಶೇಖರ್ ಎಂಬಾತನಿಗೆ ಎಸ್ಪಿ ಡಾ. ಬಿ.ಟಿ. ಕವಿತಾ ನೋಟೀಸ್ ಕೊಟ್ಟಿದ್ದರು.
ಮೂಲತಃ ಬೆಂಗಳೂರಿನ ಹೊಸಕೆರಹಳ್ಳಿಯ ನಿವಾಸಿ, ಚಾಮರಾಜನಗರದ ಅಗ್ನಿಶಾಮಕದಳದ ಚಾಲಕ, ಇಂದು ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯಲ್ಲಿ 2000 ರೂ. ಹಣವನ್ನು ದಂಡದ ರೂಪದಲ್ಲಿ ಕಟ್ಟಿದ್ದಾರೆ. ಇವರ ತಂದೆ ಪೊಲೀಸ್ ಕೆಲಸದಲ್ಲಿದ್ದರು ಎಂಬ ಕಾರಣಕ್ಕೆ ಪೊಲೀಸ್ ಎಂಬ ಸ್ಟಿಕ್ಕರ್ ಬರೆಸಿಕೊಂಡಿದ್ದರು. ಈಗ ಸ್ಟಿಕ್ಕರ್ ತೆಗೆಸುವುದಾಗಿ ಹೇಳಿರುವ ಚಂದ್ರಶೇಖರ್, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಕ್ಕೆ ಹಾಗೂ ವಿಮೆ ಇಲ್ಲದ್ದಕ್ಕೆ ಸೇರಿದಂತೆ ಒಟ್ಟು 2,000 ರೂ. ದಂಡ ಪಾವತಿ ಮಾಡಿದ್ದಾರೆ.