ನ್ಯೂಸ್

ಬಿಹಾರ ಮತಪಟ್ಟಿ ಪರಿಷ್ಕರಣೆ ವಿವಾದ; ವಿಪಕ್ಷಗಳು ಈಗಲೇ ಸೋಲಿಗೆ ನೆಪ ಹುಡುಕುತ್ತಿವೆ ಎಂದ ಅಮಿತ್ ಶಾ| Amit Shah

Amit Shah: ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳ ಮೊದಲೇ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯು ಬಿಜೆಪಿಯೇತರ ಮತದಾರರ ಹಕ್ಕನ್ನು ಕಸಿಯುವ ಹುನ್ನಾರ ಎಂಬ ವಿಪಕ್ಷಗಳ ಆರೋಪಕ್ಕೆ, ಕೇಂದ್ರ ಗೃಹಸಚಿವ ಅಮಿತ್ ಶಾ ಚುನಾವಣೆಗೂ ಮುನ್ನವೇ ಸೋಲಿಗೆ ನೆಪ ಹುಡುಕುತ್ತಿದ್ದಾರೆ ಎಂದು ಶುಕ್ರವಾರ(ಆಗಸ್ಟ್ 8) ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ಸೀತಾರ್ಮಹಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಶಾ, ಬಿಜೆಪಿ ನೇತೃತ್ವದ ಆಡಳಿತ ಮೈತ್ರಿಕೂಟಕ್ಕೆ ದೊಡ್ಡ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದರು. ತೇಜಸ್ವಿ ಯಾದವ್ ಅವರ ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷ ಮಹಾಘಟಬಂಧನ್ ರಾಜ್ಯದ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ, ಅವರ ಆಳ್ವಿಕೆಯಲ್ಲಿ ಗೂಂಡಾಗಿರಿಯನ್ನು ಪ್ರೋತ್ಸಾಹಿಸಿದ್ದರು' ಎಂದು ಟೀಕಿಸಿದರು.

ಚುನಾವಣೆಗೆ ಮುನ್ನ ನುಸುಳುಕೋರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಲ್ಲವೇ?, ಸಂವಿಧಾನ ಪ್ರಕಾರ ಭಾರತದಲ್ಲಿ ಹುಟ್ಟದವರಿಗೆ ಮತದಾನದ ಹಕ್ಕನ್ನು ನೀಡುವುದಿಲ್ಲ. ರಾಹುಲ್ ಗಾಂಧಿ ಸಂವಿಧಾನವನ್ನು ಹೊತ್ತುಕೊಂಡು ಓಡಾಡುತ್ತಾರೆ. ಅವರು ಅದನ್ನು ತೆರೆದು ಓದಬೇಕು. ಈ SIR ಪ್ರಕ್ರಿಯೆಯನ್ನು ಯಾಕೆ ಅವರು ವಿರೋಧಿಸುತ್ತಿದ್ದಾರೆ ಅಂದ್ರೆ ಒಳನುಸುಳುವವರು ಅವರ ಮತಬ್ಯಾಂಕ್ ಆಗಿದ್ದಾರೆ" ಎಂದು ಶಾ ಹೇಳಿದರು.

ಏನಿದು ಬಿಹಾರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ?

ಕೆಲವು ತಿಂಗಳು ಬಾಕಿ ಇರುವ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನವೇ, ಚುನಾವಣಾ ಆಯೋಗವು ಬಿಹಾರ ಮತದಾರರ ಪಟ್ಟಿಯ ಪರಿಷ್ಕರಣೆಗೆ ಆದೇಶಿಸಿದ್ದು ವಿವಾದಕ್ಕೆ ಕಾರಣವಾಗಿದೆ. ತೇಜಸ್ವಿ ಯಾದವ್​ರ ಆರ್​ಜೆಡಿ ಸೇರಿದಂತೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು, ಆಯೋಗವು ಬಿಜೆಪಿ ಆದೇಶದಂತೆ ವರ್ತಿಸುತ್ತಿದೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಕೆಲಸ ಮಾಡಲಾಗ್ತಿದೆ ಎಂದು ಆರೋಪಿಸಿವೆ.

ಅರ್ಹ ಮತದಾರರಾಗಿ ಮರು ನೋಂದಾಯಿಸಿಕೊಳ್ಳಲು ಜನರು ಸಲ್ಲಿಸಬೇಕಾದ ಪೂರ್ವ-ಅನುಮೋದಿತ ದಾಖಲೆಗಳ ಪಟ್ಟಿಯಿಂದ ವ್ಯಾಪಕವಾಗಿ ಬಳಸಲಾಗುವ ಆಧಾರ್ ಮತ್ತು ಚುನಾವಣಾ ಸಂಸ್ಥೆಯ ಸ್ವಂತ ಮತದಾರರ ಕಾರ್ಡ್ ಸೇರಿದಂತೆ ಸರ್ಕಾರ ನೀಡಿದ ಕೆಲವು ಗುರುತಿನ ಚೀಟಿಗಳನ್ನು ಚುನಾವಣಾ ಆಯೋಗವು ರದ್ದುಪಡಿಸಿದೆ ಎಂದು ವಿರೋಧ ಪಕ್ಷಗಳು ದೂರಿವೆ.

ಆಯೋಗದ ಪ್ರಕ್ರಿಯೆ ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ಮತ್ತು ಇತ್ಯರ್ಥಪಡಿಸಲು ಸಾಕಷ್ಟು ಸಮಯವನ್ನು ಖಚಿತಪಡಿಸಿಕೊಳ್ಳುವಂತೆ ಮತ್ತು ಮರು ಪರಿಶೀಲನೆಗಾಗಿ ಆಧಾರ್ ಸೇರಿದಂತೆ ಕನಿಷ್ಠ ಮೂರು ಸರ್ಕಾರ ನೀಡಿದ ಐಡಿಗಳನ್ನು ಬಳಸುವಂತೆ ಸುಪ್ರೀಂ ಸೂಚನೆ ನೀಡಿದೆ.

ಅದಾಗ್ಯೂ ಆಯೋಗವೂ ಕರಡು ಪಟ್ಟಿಯಿಂದ ನೇಪಾಳಿ, ಮ್ಯಾನ್ಮರ್ ವಲಸಿಗರು, ರಾಜ್ಯದಿಂದ ವಲಸೆ ಹೋದವರು, ಎರಡೆರಡೂ ಬಾರಿ ನೋಂದಾಯಿಸದವರು, ಮೃತಪಟ್ಟವರನ್ನು ಸೇರಿ 65 ಲಕ್ಷ ಹೆಸರುಗಳನ್ನು ತೆಗೆದುಹಾಕಿದ್ದೇವೆ ಎಂದು ಹೇಳಿದೆ. (ಏಜೆನ್ಸೀಸ್)