ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಮುಂಬೈಗೆ ಬಂದಿರುವ ಬಿಹಾರದ ನಾಲ್ವರು ಪೊಲೀಸರ ತಂಡ ಐಷಾರಾಮಿ ಬಿಎಂಡಬ್ಲ್ಯು, ಜಾಗ್ವಾರ್ ಕಾರುಗಳಲ್ಲಿ ಓಡಾಡುತ್ತಿರುವುದು ಹಲವು ಹುಬ್ಬುಗಳನ್ನು ಮೇಲೇರುವಂತೆ ಮಾಡಿದೆ.
ಪ್ರಕರಣದ ತನಿಖೆಯಲ್ಲಿ ಬಿಹಾರ ಪೊಲೀಸರ ತಂಡಕ್ಕೆ ಮುಂಬೈ ಪೊಲೀಸರಿಂದ ಹೇಳಿಕೊಳ್ಳುವಂಥ ಸಹಕಾರ ದೊರೆಯುತ್ತಿಲ್ಲ. ಆದರೂ ಅವರು ತನಿಖೆಯನ್ನು ಮೊಟಕುಗೊಳಿಸಿ ಹಿಂದಿರುಗಲು ನಿರಾಕರಿಸುತ್ತಿದ್ದಾರೆ. ಕೆಲವೊಮ್ಮೆ ಆಟೋರಿಕ್ಷಾ ಇಲ್ಲವೇ ಮೋಟಾರ್ಸೈಕಲ್ಗಳನ್ನು ಬಳಸುತ್ತಿರುವ ಅವರು, ಹೆಚ್ಚಿನ ಭಾಗ ಐಷಾರಾಮಿ ಕಾರುಗಳನ್ನೇ ಬಳಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಬ್ಯಾಂಕ್ ಖಾತೆಯ ವಿವರ ಪಡೆದುಕೊಳ್ಳಲು ಬಾಂದ್ರಾದಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ಗುರುವಾರ ಬಂದಿದ್ದ ಬಿಹಾರ ಪೊಲೀಸರ ತಂಡ ಬಿಎಂಡಬ್ಲ್ಯು ಕಾರ್ನಲ್ಲಿ ಬಂದಿತ್ತು. ಇವರು ಐಷಾರಾಮಿ ಕಾರಿನಲ್ಲಿ ಬ್ಯಾಂಕ್ಗೆ ಬಂದ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ, ಆ ಕಾರನ್ನು ಬಿಟ್ಟು ಆಟೋರಿಕ್ಷಾದಲ್ಲಿ ಮರಳಿದರು ಎನ್ನಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಅನ್ಲಿಮಿಟೆಡ್ ಆಫರ್; ವಿಧಾನಸಭೆ ಅಧಿವೇಶನ ನಿಗದಿ ಬಳಿಕ ಬೆಲೆಯಲ್ಲಿ ಭಾರಿ ಏರಿಕೆ
ಸುಶಾಂತ್ ಅವರ ಮಾಜಿ ಗರ್ಲ್ಫ್ರೆಂಡ್ ಅಂಕಿತಾ ಲೋಖಂಡೆ ಅವರ ಮನೆಗೆ ಗುರುವಾರ ಸಂಜೆ ತೆರಳುವಾಗ ಬಿಹಾರ ಪೊಲೀಸರ ತಂಡ ಐಷಾರಾಮಿ ಜಾಗ್ವಾರ್ ಕಾರಿನಲ್ಲಿ ತೆರಳಿತ್ತು.
ಬುಧವಾರದಂದು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯ ವಿವರ ಪಡೆದುಕೊಳ್ಳಲು ಬಿಹಾರ ಪೊಲೀಸರ ತಂಡ ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳನ್ನು ಭೇಟಿಯಾಗಲು ಬಂದಿತ್ತು. ಆದರೆ, ಹಿರಿಯ ಅಧಿಕಾರಿಗಳು ಇವರನ್ನು ಭೇಟಿಯಾಗಲು ನಿರಾಕರಿಸಿದರು. ಆ ಸಂದರ್ಭದಲ್ಲಿ ಸುದ್ದಿಗಾರರು ಇವರನ್ನು ಸುತ್ತುವರಿದಿದ್ದರು. ಅವರಿಂದ ತಪ್ಪಿಸಿಕೊಂಡು ಅವರೆಲ್ಲರೂ ಮೋಟಾರ್ಸೈಕಲ್ನಲ್ಲಿ ಪರಾರಿಯಾಗಿದ್ದರು.
ಸುಶಾಂತ್ ಜತೆ ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ರಿಯಾ ಚಕ್ರವರ್ತಿ ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ 15 ಕೋಟಿ ರೂ.ಅನ್ನು ಅಕ್ರಮವಾಗಿ ತಮಗೆ ಬೇಕಾದವರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಅವರು ಬಿಹಾರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ವಿಚಾರಣೆಗಾಗಿ ಬಿಹಾರ ಪೊಲೀಸರು ಮುಂಬೈಗೆ ಬಂದಿದ್ದಾರೆ.