ನ್ಯೂಸ್

ಬಿಹಾರ: ಪೊಲೀಸ್‌ ಸ್ಟೇಷನ್‌ನಲ್ಲೇ ದಂಪತಿ ಸಾವು; ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪಾಟ್ನಾ: ಪೊಲೀಸ್​ ಕಸ್ಟಡಿಯಲ್ಲಿಯೇ ಗಂಡ-ಹೆಂಡತಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ಎಸೆದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆ ತಾರಾಬರಿ ಗ್ರಾಮದಲ್ಲಿ ನಡೆದಿದೆ.

ಪೊಲೀಸರು ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಇಬ್ಬರು ಗ್ರಾಮಸ್ಥರು ಗಾಯಗೊಂಡಿದ್ದಾರೆ.

ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ತೀರಿಕೊಂಡ ಬಳಿಕ 14 ವರ್ಷದ ಅತ್ತಿಗೆಯನ್ನು ಮದುವೆಯಾಗಿದ್ದರು. ಪತ್ನಿ ತೀರಿಕೊಂಡ ಬಳಿಕ ಅತ್ತಿಗೆಯನ್ನು ಮನೆಗೇ ಕರೆದುಕೊಂಡು ಬಂದಿದ್ದ. ಈ ವಿಷಯ ತಿಳಿದ ಪೊಲೀಸರು ಮೇ 16ರಂದು ವ್ಯಕ್ತಿ ಹಾಗೂ 14 ವರ್ಷದ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದರು. ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ಕೂಡ ದಾಖಲಿಸಿದ್ದರು. ವಿಚಾರಣೆಗಾಗಿ ಪೊಲೀಸರು ಇಬ್ಬರನ್ನೂ ಕರೆದೊಯ್ದಿದ್ದರು. ಆದರೆ, ಪೊಲೀಸ್‌ ಠಾಣೆಯಲ್ಲಿಯೇ ವ್ಯಕ್ತಿ ಹಾಗೂ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವ್ಯಕ್ತಿ ಮತ್ತು ಬಾಲಕಿಯನ್ನು ಪೊಲೀಸರೇ ಕೊಂದಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇಬ್ಬರನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸಸರು ಅವರ ಮೇಲೆ ಹಲ್ಲೆ ವ್ಯಸಗಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಆಕ್ರೋಶದಲ್ಲಿ ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ದಾಳಿಯಲ್ಲಿ ಐದಾರು ಪೊಲೀಸರಿಗೆ ಗಾಯಗಳಾಗಿವಎ ಎಂದು ವರದಿಯಾಗಿದೆ.

ಪೊಲೀಸ್ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯವಾಳಿಗಳ ಪ್ರಕಾರ, ವ್ಯಕ್ತಿಯು ಲಾಕಪ್‌ ಬಾಗಿಲು ಹತ್ತಿ, ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಆದರೆ, ಹಿರಿಯ ಪೊಲೀಸ್‌ ಅಧಿಕಾರಿಗಳು ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.