ನ್ಯೂಸ್

Asaduddin Owaisi | ಬಿಹಾರದ ಮುಸ್ಲಿಮರಿಗೆ ಪ್ರಬಲ ನಾಯಕರಿಲ್ಲ.. ಮೈತ್ರಿ ಬಗ್ಗೆ ಆರ್​ಜೆಡಿ ಕ್ಯಾರೆ ಎನ್ನುತ್ತಿಲ್ಲ : ಅಸಾದುದ್ದೀನ್ ಓವೈಸಿ

Asaduddin Owaisi: ಬಿಹಾರದಲ್ಲಿ ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ನಾಯಕರಿದ್ದಾರೆ, ಆದರೆ ಮುಸ್ಲಿಮರಿಗೆ ಇಲ್ಲಿ ಯಾವುದೇ ಪ್ರಬಲ ನಾಯಕರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿಕೆ ನೀಡಿದ್ದಾರೆ.

ಬಿಹಾರದಲ್ಲೂ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಓವೈಸಿ, ಯಾದವ್, ಪಾಸ್ವಾನ್, ಠಾಕೂರ್ ಸೇರಿದಂತೆ ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ನಾಯಕರಿದ್ದಾರೆ, ಆದರೆ ಬಿಹಾರದಲ್ಲಿ ಶೇಕಡಾ 19 ರಷ್ಟಿರುವ ಮುಸ್ಲಿಮರಿಗೆ ಯಾವುದೇ ನಾಯಕರಿಲ್ಲ ಎಂದು ಹೇಳಿದರು. ಕಳೆದ ತಿಂಗಳು ಪಕ್ಷದ ಪರ ಪ್ರಚಾರಕ್ಕಾಗಿ ಬಿಹಾರಕ್ಕೆ ತೆರಳಿದ್ದ ಓವೈಸಿ, ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಪ್ರಮುಖ ಪಕ್ಷಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗಲಿಲ್ಲ ಎಂದು ತಿಳಿದುಬಂದಿದೆ.

ಬಿಹಾರದ ಮುಸ್ಲಿಮರಿಗೆ ಸಂದೇಶ ನೀಡಿರುವ ಓವೈಸಿ, ದೇಶದಲ್ಲಿರುವ ಜನಸಂಖ್ಯೆಯನ್ನು ಪರಿಗಣಿಸಿ ಕನಿಷ್ಠ 50 ಮುಸ್ಲಿಂ ಲೋಕಸಭಾ ಸಂಸದರು ಸಂಸತ್ತಿನಲ್ಲಿರಬೇಕು, ದೊಡ್ಡ ಮಟ್ಟದಲ್ಲಿ ನಮ್ಮ ಸಮುದಾಯದ ಪರ ಧ್ವನಿ ಇದ್ದರೆ, ಪ್ರಧಾನಿ ಮೋದಿ ವಕ್ಫ್ ಕಾಯ್ದೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಆರ್‌ಜೆಡಿ, ಯಾದವ್​ ಮತ್ತು ಮುಸ್ಲಿ ಮತ ಸಂಯೋಜನೆಯ ಮೂಲಕ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ತೇಜಸ್ವಿ ಯಾದವ್, ಓವೈಸಿಯನ್ನು ಮಹಾಘಟಬಂಧನ್‌ಗೆ ಸೇರಿಸಿಕೊಂಡರೆ ದಶಕಗಳಿಂದ ಕಾಪಾಡಿಕೊಂಡು ಬಂದಿರುವ ದೊಡ್ಡ ಮತಗಳು ಸಾರಾಸಗಟಾಗಿ ಓವೈಸಿ ಪಕ್ಷದತ್ತ ವಾಲುತ್ತವೆ ಎನ್ನುವುದು ಆರ್​ಜೆಡಿ ನಾಯಕನ ಆತಂಕಕ್ಕೆ ಕಾರಣವಾಗಿದೆ.

ಬಿಹಾರದ ಸಭೆಯೊಂದರಲ್ಲಿ ಈ ಹಿಂದೆ ಮಾತನಾಡಿದ್ದ ಓವೈಸಿ, ತೇಜಸ್ವಿ ಯಾದವ್ ನಾಲ್ವರು ಎಐಎಂಐಎಂ ಶಾಸಕರನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು. ಮೈತ್ರಿ ವಿಷಯವಾಗಿ ನಮ್ಮ ಸಂಸ್ಕೃತಿಯಂತೆ ತಂದೆ ಜೀವಂತವಾಗಿರುವಾಗ ಅವರೊಂದಿಗೆ ನಾವು ಸಂಪರ್ಕಿಸುತ್ತೇವೆ. ಅದೇ ರೀತಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಇಮಾನ್, ಲಾಲು ಪ್ರಸಾದ ಯಾದವ್​ರಿಗೆ ಪತ್ರ ಬರೆದು ಎಐಎಂಐಎಂ ಮೈತ್ರಿಗೆ ಸಿದ್ಧವಾಗಿದೆ ಎಂದು ತಿಳಿಸಿದರು, ಇದಾದ ಬಳಿಕ ತೇಜಶ್ವಿಗೂ ಪತ್ರ ಕಳುಹಿಸಲಾಯಿತು. ಆದರೆ ಅವರು ಇಲ್ಲಿಯವೆರಗೂ ಪ್ರತಿಕ್ರಿಯೆ ನೀಡಿಲ್ಲ, ಹೀಗಿದ್ದಾಗ ನಾವು ಏನು ಮಾಡಲು ಸಾಧ್ಯ ಎಂದರು.

ಮಹಾಘಟಬಂಧನ್ ಮುಂದಿನ ಸರ್ಕಾರವನ್ನು ರಚಿಸಿದರೆ, AIMIM ಸಚಿವ ಸಂಪುಟದಲ್ಲಿ ಯಾವುದೇ ಪಾಲನ್ನು ಕೇಳುವುದಿಲ್ಲ ಎಂದು ಇಮಾನ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. 2022 ರ ಬಿಹಾರ ಜಾತಿ ಸಮೀಕ್ಷೆಯ ಪ್ರಕಾರ, ಸುಮಾರು 13 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ. 17.7 ರಷ್ಟಿದ್ದಾರೆ ಎಂದು ತಿಳಿದುಬಂದಿದೆ.

2020ರ ಬಿಹಾರ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದ್ದ AIMIM, ರಾಜ್ಯದ ಸೀಮಾಂಚಲ್ ಪ್ರದೇಶದಲ್ಲಿ ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಐವರಲ್ಲಿ ನಾಲ್ಕು ಶಾಸಕರು ಆರ್​​ಜೆಡಿಗೆ ಪಕ್ಷಾಂತರಗೊಂಡರು.(ಏಜೆನ್ಸೀಸ್​​)