ಪಾಟ್ನಾ: ಮುಂದಿನ ತಿಂಗಳು ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ ದಿನೇ ದಿನೇ ಬಿರುಸು ಪಡೆದಿದ್ದು, ಸೀಟು ಹಂಚಿಕೆ ಗೊಂದಲ ಹಿನ್ನೆಲೆ ಬಿಹಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಇಂದು(ಅ. 29) ಬಿಹಾರದ ಹಲವು ಕ್ಷೇತ್ರಗಳಲ್ಲಿ ಪ್ರಚಾರವನ್ನು ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ಬಿಹಾರ ಕಾ ತೇಜಸ್ವಿ ಪ್ರಾಣ್ ಹೆಸರಿನ ಪ್ರಣಾಳಿಕೆ ಬಿಡುಡಗೆ ಮಾಡಿದ್ದ ಇಂಡಿಯಾ ಮೈತ್ರಿಕೂಟ, ಇಂದಿನಿಂದ ಚುನಾವಣಾ ಕಣವನ್ನು ಮತ್ತಷ್ಟು ರಂಗೇರಿಸಲಿದೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮುಜಫರ್ಪುರ ಮತ್ತು ದರ್ಭಂಗಾದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಅವರೊಂದಿಗೆ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಸೇರಿಕೊಳ್ಳಲಿದ್ದಾರೆ.
ಕಳೆದ ತಿಂಗಳು ಕೈಗೊಂಡಿದ್ದ ಮತದಾರರ ಅಧಿಕಾರ ಯಾತ್ರೆಯ ಬಳಿಕ ರಾಹುಲ್ ಇಂದು ಬಿಹಾರಕ್ಕೆ ಮತ್ತೆ ಮರಳುತ್ತಿದ್ದು. ಅಕ್ಟೋಬರ್ 29 ರಿಂದ ನವೆಂಬರ್ 7 ರವರೆಗೆ ಸುಮಾರು 12 ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇನ್ನು ಸಂಸದೆ ಪ್ರಿಯಾಂಕಾ ಗಾಂಧಿಯವರನ್ನು ಬಿಹಾರದಾದ್ಯಂತ ಮಹಿಳಾ ಮತದಾರರನ್ನು ಸೆಳೆಯಲು ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ನವೆಂಬರ್ 1 ರಿಂದ 8ರವರೆಗೆ ಬೇಗುಸರಾಯ್, ಬೆಲ್ದೌರ್, ಖಗಾರಿಯಾ, ಲಖಿಸರಾಯ್, ಬಾರ್ಬಿಘಾ, ರೋಸೆರಾ, ಗೋವಿಂದಗಂಜ್, ಚನ್ಪಟ್ಟಿಯಾ, ಕಡ್ವಾ ಮತ್ತು ಕಸ್ಬಾ ಮುಂತಾದ ಕ್ಷೇತ್ರಗಳಲ್ಲಿ ಸುಮಾರು ಎಂಟು ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಭಾಗವಹಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ.
ಬಿಹಾರದ ವಿಧಾನಸಭಾ ಚುನಾವಣೆಯು ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನ. 14ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)