ಬೇಗುಸರಾಯ್: ಬಿಹಾರ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೂ ಮೂರು ದಿನ ಬಾಕಿಯಿದ್ದು, ಚುನಾವಣಾ ಕಣ ರಂಗೇರಿದೆ. ಭಾನುವಾರ(ನ. 02) ಬೇಗುಸರಾಯ್ನ ಮೀನುಗಾರರೊಂದಿಗೆ ಸಂವಾದ ಮಾಡುವ ವೇಳೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಕೆರೆಗೆ ಹಾರಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ.
ವಿಕಾಸಶೀಲ್ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಖೇಶ್ ಸಾಹ್ನಿ, ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಹಾಗೂ ಮೀನುಗಾರರೊಂದಿಗೆ ರಾಹುಲ್ ಗಾಂಧಿ, ಬೇಗುಸರೈನಲ್ಲಿರುವ ಕೆರೆಯ ಮಧ್ಯಭಾಗಕ್ಕೆ ದೋಣಿಯಲ್ಲಿ ತೆರೆಳಿದ್ದು, ಅಲ್ಲಿ ಮೀನುಗಾರರ ಸಮಸ್ಯೆಯನ್ನು ಆಲಿಸಿದ್ದಾರೆ.
ಈ ವೇಳೆ ಮೀನುಗಾರ ಸಮುದಾಯಕ್ಕೆ ಸೇರಿದ ಡಿಸಿಎಂ ಅಭ್ಯರ್ಥಿ ಮುಖೇಶ್ ಅವರು ಸಮವಸ್ತ್ರ ಕಳಚಿ ಮೀನುಗಾರರೊಂದಿಗೆ ಕೆರೆಗೆ ಜಿಗಿದಿದ್ದಾರೆ. ಬಳಿಕ ರಾಹಲ್ ಗಾಂಧಿವರಿಗೆ ಹಾರುವಂತೆ ಕರೆದಿದ್ದು, ತಕ್ಷಣ ರಾಹುಲ್ ಗಾಂಧಿ ಸಹ ನೀರಿಗೆ ಜಿಗಿದಿದ್ದಾರೆ. ಈ ವೇಳೆ ಜನರು ರಾಹುಲ್ ಗಾಂಧಿ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಕೆರೆ ನೀರಿನಲ್ಲಿ ರಾಹುಲ್ ಈಜಾಡಿ ಮೀನು ಹಿಡಿದಿದ್ದಾರೆ.
ಘಟನೆಯ ವಿಡಿಯೋವನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಛತ್ ಪೂಜೆ ವೇಳೆ ದೆಹಲಿಯಲ್ಲಿ ಸ್ನಾನ ಮಾಡಲು ಕಲುಷಿತ ಯಮುನಾದ ನದಿ ಬಳಿಕ ಪ್ರತ್ಯೇಕ ಕೊಳ ನಿರ್ಮಿಸಿದ್ದಕ್ಕೆ ಪ್ರಧಾನಿ ಮೋದಿಯನ್ನು ಟೀಕಿಸಿದ್ದು, ಇದು ನಿಜವಾದ ಕೊಳ ಎಂದು ಕಿಡಿಕಾರಿದೆ. (ಏಜೆನ್ಸೀಸ್)