ಪಟನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಹಿಂದುಸ್ತಾನಿ ಅವಾಂ ಮೋರ್ಚಾ ಅಧ್ಯಕ್ಷ ಜಿತನ್ ರಾಮ್ ಮಾಂಜಿ ಇಮಾಮ್ ಗಂಜ್ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇದೇ ವೇಳೆ, ಹಸನ್ಪುರ ಕ್ಷೇತ್ರದಲ್ಲಿ ಆರ್ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಗೆಲುವು ಕಂಡಿದ್ದಾರೆ.
ಇಮಾಮ್ಗಂಜ್ನಲ್ಲಿ ಮಾಂಜಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಆರ್ಜೆಡಿಯ ಉದಯ್ ನಾರಾಯಣ್ ಚೌಧರಿ ಅವರನ್ನು 16,034 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಮಾಂಜಿ ಅವರ ಪಕ್ಷ ಎನ್ಡಿಎ ಮೈತ್ರಿಕೂಟದಲ್ಲಿದೆ. ಮಾಂಜಿ ಈ ಹಿಂದೆ ಬಿಹಾರದ ಮುಖ್ಯಮಂತ್ರಿಯೂ ಆಗಿದ್ದರು. 1980ರ ದಶಕದಿಂದ ಅನೇಕ ಸಲ ಮಾಂಜಿ ವಿಧಾನಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಹಸನ್ಪುರ ಕ್ಷೇತ್ರದಲ್ಲಿ ತೇಜ್ ಪ್ರತಾಪ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಯುನ ರಾಜ್ ಕುಮಾರ್ ರಾಯ್ ಅವರನ್ನು 21,139 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ತೇಜ್ ಪ್ರತಾಪ್ ಯಾದವ್ ತಮ್ಮ ಹಿಂದಿನ ಕ್ಷೇತ್ರ ವೈಶಾಲಿಯ ಮಹುವಾ ಕ್ಷೇತ್ರವನ್ನು ಬಿಟ್ಟು ಈ ಬಾರಿ ಸಮಸ್ಟಿಪುರ ಜಿಲ್ಲೆಯ ಹಸನ್ಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಗೆಲುವು ಕಂಡಿದ್ದಾರೆ. (ಏಜೆನ್ಸೀಸ್)