ನ್ಯೂಸ್

Bihar Election | ಮತ್ತೊಮ್ಮೆ ಎನ್​ಡಿಎ ಸರ್ಕಾರ...ಯುವಕರ ಕನಸುಗಳೇ ನನ್ನ ಸಂಕಲ್ಪ : ಪ್ರಧಾನಿ ನರೇಂದ್ರ ಮೋದಿ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ (Bihar Election) ಮೊದಲ ಹಂತದ ಮತದಾನಕ್ಕೆ ಇಂದು ಚಾಲನೆ ಸಿಕ್ಕಿದ್ದು, 121 ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಹಬ್ಬವನ್ನು ಜನ ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ (ನ 6) ಅರಾರಿಯಾದಲ್ಲಿ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಮ್ಮೆ ಎನ್​ಡಿಎ ಸರ್ಕಾರ ಎಂಬ ಘೋಷಣೆ ರಾಜ್ಯಾದ್ಯಂತ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು.

ಬಿಹಾರದ ಈ ಭಾವನೆಯ ಹಿಂದೆ ತಾಯಂದಿರು ಮತ್ತು ಸಹೋದರಿಯರ ಭರವಸೆಗಳು ಮತ್ತು ಯುವಕರ ಕನಸುಗಳಿವೆ. ಯುವಜನರೇ ನಿಮ್ಮ ಕನಸು ಮೋದಿ ಸಂಕಲ್ಪ, ನಮ್ಮ ಸರ್ಕಾರ ಒಳನುಸುಳುವವರನ್ನು ಪತ್ತೆ ಮಾಡಿ ಅವರ ದೇಶಗಳಿಗೆ ವಾಪಸ್ ಕಳುಹಿಸುತ್ತದೆ, ಇತ್ತ ಆರ್ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ಅವರನ್ನು ಹಿಂಬಾಗಿಲಿನ ಮೂಲಕ ಭಾರತೀಯ ನಾಗರಿಕರನ್ನಾಗಿ ಮಾಡಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ತಪ್ಪದೇ ಮತದಾನ ಮಾಡಿ

ಬಿಹಾರದ ಚುನಾವಣೆಯ ಮತದಾನದ ಕುರಿತಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಜನರು ಉತ್ಸಾಹದಿಂದ ಮತ ಚಲಾಯಿಸಲು ಸರತಿ ಸಾಲುಗಳಲ್ಲಿ ನಿಂತಿದ್ದನ್ನು ನೋಡುತಿದ್ದೇನೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬರುತ್ತಿದ್ದಾರೆ. ಬಿಹಾರದ ಯುವಕರಲ್ಲಿಯೂ ಇದೇ ರೀತಿಯ ಉತ್ಸಾಹವಿದೆ, ಎಲ್ಲರು ತಪ್ಪದೆ ಮತಚಲಾಯಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು.

ಜಂಗಲ್ ರಾಜ್​ನಿಂದ ನಿಮ್ಮ ಹೆತ್ತವರ ಕನಸ್ಸು ನುಚ್ಚುನೂರಾದವು

ಈ ಹಿಂದೆ ನಿಮ್ಮ ಅಜ್ಜ-ಅಜ್ಜಿಯರ ಒಂದು ಮತವು ಬಿಹಾರವನ್ನು ಸಾಮಾಜಿಕ ನ್ಯಾಯದ ಭೂಮಿಯನ್ನಾಗಿಸಿತ್ತು, ಆದರೆ ಅದರ ಬಳಿಕ 90 ರ ದಶಕದಲ್ಲಿ ಆರ್‌ಜೆಡಿಯ ಜಂಗಲ್ ರಾಜ್ ಆಡಳಿತ ಬಿಹಾರದ ಮೇಲೆ ದಾಳಿ ಮಾಡಿತು. ಆಗ ಪಿಸ್ತೂಲ್, ಕ್ರೌರ್ಯ, ಭ್ರಷ್ಟಾಚಾರ ಮತ್ತು ದುರಾಡಳಿತದ್ದೆ ಸದ್ದು,  ಸರ್ಕಾರವನ್ನು ನಡೆಸುವ ಹೆಸರಿನಲ್ಲಿ, ನಿಮ್ಮನ್ನು ಲೂಟಿ ಮಾಡಲಾಯಿತು. ನಿಮ್ಮ ಹೆತ್ತವರ ಕನಸುಗಳು ನುಚ್ಚುನೂರಾದವು ಎಂದು ಹೇಳಿದರು.

ಎನ್​ಡಿಎದಿಂದ ಅಭಿವೃದ್ದಿಗೆ ವೇಗ..

ಆಡಳಿತಾರೂಢ ಎನ್‌ಡಿಎ ಸರ್ಕಾರದಿಂದ ಬಿಹಾರ ಅಭಿವೃದ್ಧಿ ವಿಷಯದಲ್ಲಿ ವೇಗ ಪಡೆದುಕೊಂಡಿದ್ದು, 2014 ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಪಾಟ್ನಾದಲ್ಲಿ ಒಂದು ಐಐಟಿ ತೆರೆಯಲಾಗಿದೆ, ಒಂದು ಐಐಎಂ ತೆರೆಯಲಾಗಿದೆ, ಒಂದು ಏಮ್ಸ್ ತೆರೆಯಲಾಗಿದೆ, ಮತ್ತು ದರ್ಭಂಗಾ ಏಮ್ಸ್‌ನ ಕೆಲಸವು ಪ್ರಗತಿಯಲ್ಲಿದೆ. ಭಾಗಲ್ಪುರದಲ್ಲಿ ಒಂದು ಐಐಐಟಿ ಕೂಡ ಇದೆ, ನಾಲ್ಕು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸಹ ಸ್ಥಾಪಿಸಲಾಗಿದೆ.

ಎನ್‌ಡಿಎ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ನಾಲ್ಕು ಪ್ರಮುಖ ಸೇತುವೆಗಳನ್ನು ನಿರ್ಮಿಸಲಾಗಿದೆ, ಮಹಾತ್ಮ ಗಾಂಧಿ ಸೇತುವನ್ನು ಸಂಪೂರ್ಣವಾಗಿ ನವೀಕರಿಸಿ ಉಕ್ಕಿನ ಸೇತುವೆಯಾಗಿ ಪರಿವರ್ತಿಸಲಾಗಿದೆ, ಏಳು ಎಕ್ಸ್‌ಪ್ರೆಸ್‌ವೇಗಳನ್ನು ಮಂಜೂರು ಮಾಡಿದೆ, ಅವುಗಳಲ್ಲಿ ಒಂದು ಈಗಾಗಲೇ ಪೂರ್ಣಗೊಂಡಿದೆ" ಎಂದು ತಮ್ಮ ಸರ್ಕಾರದ ಅಭಿವೃದ್ದಿಯ ಪಟ್ಟಿಯನ್ನು ಜನರ ಮುಂದಿಟ್ಟರು.

ಬಿಹಾರ ವಿಧಾನಸಭಾ ಚುನಾವಣೆಗಳು ಇಂದು (ನವೆಂಬರ್ 6) ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್​ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)