ನ್ಯೂಸ್

Bihar Election | ತೇಜಸ್ವಿ ಯಾದವ್​​ ಮಹಾಘಟಬಂಧನ್ ಸಿಎಂ ಅಭ್ಯರ್ಥಿ; ಅಧಿಕೃತವಾಗಿ ಘೋಷಿಸಿದ ಅಶೋಕ್​ ಗೆಹ್ಲೋಟ್​

Patna: ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್​ರನ್ನು ಆಯ್ಕೆ ಮಾಡಿ, ಅಧಿಕೃತವಾಗಿ ಘೋಷಿಸಲಾಗಿದೆ.

ಕಳೆದ ಒಂದು ವಾರದಿಂದ ನಡೆದ ಹಗ್ಗ ಜಗ್ಗಾಟದ ಬಳಿಕ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್​​​ರನ್ನು ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಯಿತು, ಈ ಸಂದರ್ಭ ವಿಪಕ್ಷಗಳು ಬಲಪ್ರದರ್ಶನದ ವೇದಿಕೆಯಾಗಿ ಮಾರ್ಪಟ್ಟಿತ್ತು.

ಸೀಟು ಹಂಚಿಕೆ ಮಾತುಕತೆಯ ಸಮಯದಲ್ಲಿ ತುಂಬಾ ಚೌಕಾಶಿ ನಡೆಸಿದ ವಿಕಾಸಶೀಲ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿಯನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು.ನಿಶಾದ್ ಸಮುದಾಯದಲ್ಲಿ ಪ್ರಭಾವ ಹೊಂದಿರುವ ಸಹಾನಿ ಜೊತೆಗೆ ಇಂಡಿಯಾ ಕೂಟದ ಮತ್ತೊಬ್ಬ ಹಿಂದುಳಿದ ವರ್ಗದ ನಾಯಕನನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಗೆಹ್ಲೋಟ್ ಈ ವೇಳೆ ಘೋಷಿಸಿದರು. ಎಲ್ಲಾ ಪಕ್ಷದ ಹಿರಿಯ ನಾಯಕರುಗಳೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿದ ಬಳಿಕ ತೇಜಸ್ವಿಯನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ನಾವು ನಿರ್ಧರಿಸಿದ್ದೇವೆ. ರಾಜಕೀಯವಾಗಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಬಿಹಾರ ವಿಧಾನಸಭಾ ಚುನಾವಣಾ ಕಾಂಗ್ರೆಸ್​​ ಉಸ್ತುವಾರಿ ಅಶೋಕ್ ಗೆಹ್ಲೋಟ್ ಹೇಳಿದರು

ತೇಜಸ್ವಿ ಯಾದವ್ ಯುವಕ ಮತ್ತು ಬದ್ಧತೆ ಇರುವ ವ್ಯಕ್ತಿ, ಅವರನ್ನು ನಾವು ನಮ್ಮ ಅಭ್ಯರ್ಥಿಯನ್ನಾಗಿಸಿಸದ್ದೇವೆ ಎಂದ ಗೆಹ್ಲೋಟ್​​ ಇದೇ ವೇಳೆ ಬಿಜೆಪಿಗೆ ಸವಾಲು ಹಾಕಿದರು. ನಾನು ಅಮಿತ್ ಷಾರನ್ನು ಕೇಳಲು ಬಯಸುತ್ತೇನೆ, ತೇಜಸ್ವಿ ಯಾದವ್ ನಮ್ಮ ನಾಯಕ, ಈಗ ನಿಮ್ಮ ಸರದಿ, ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಿ ಎಂದರು.

ಈ ಬಾರಿಯೂ ಘೋಷಿಸಿ...

ಇದೇ ವೇಳೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ, ಎಲ್ಲಾ ಮೈತ್ರಿ ಪಾಲುದಾರರಿಗೆ ಧನ್ಯವಾದ ಅರ್ಪಿಸಿದರು. ಬಿಹಾರವನ್ನು ಪುನರ್ನಿರ್ಮಿಸಲು ಮಹಾಘಟಬಂಧನ್ ಒಟ್ಟಾಗಿ ಕೆಲಸ ಮಾಡುತ್ತದೆ, ನಿತೀಶ್ ಕುಮಾರ್​ಗೆ ಅನ್ಯಾಯವಾಗುತ್ತಿದೆ, ನಿತೀಶ್ ಕುಮಾರ್ ಎನ್‌ಡಿಎಯ ಮುಖ್ಯಮಂತ್ರಿ ಮುಖ ಎಂದು ಯಾವುದೇ ಘೋಷಣೆ ಹೊರ ಹೊಮ್ಮಿಲ್ಲ. ನಾವು ಅಮಿತ್ ಷಾರನ್ನು ಕೇಳಲು ಬಯಸುತ್ತೇವೆ. ನೀವು ಪ್ರತಿ ಚುನಾವಣೆಗೂ ಮೊದಲು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮುಖವಾಗಿ ಘೋಷಿಸಿದ್ದೀರಿ, ಈ ಬಾರಿ ಏಕೆ ಹಾಗೆ ಮಾಡಬಾರದು? ಎಂದು ಪ್ರಶ್ನಿಸಿದರು.

ಸೀಟು ಹಂಚಿಕೆ ಕುರಿತು ವಾರಗಳ ಕಾಲ ನಡೆದ ಸಂಘರ್ಷದ ಬಳಿಕ ಇಂದಿನ ಪತ್ರಿಕಾಗೋಷ್ಠಿಯು ಮಹಾಘಟಬಂಧನ್‌ನ ಒಗ್ಗಟ್ಟಿನ ಪ್ರದರ್ಶನವಾಗಿದೆ. ಸೀಟು ಒಪ್ಪಂದಕ್ಕೆ ಚೌಕಾಶಿ ಮಾಡುವ ಅವಕಾಶವಾಗಿ ತೇಜಸ್ವಿ ಯಾದವ್ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸುವುದನ್ನು ಕಾಂಗ್ರೆಸ್ ಇಲ್ಲಿಯವರೆಗೆ ದೂರವಿಟ್ಟಿತ್ತು ಎನ್ನಲಾಗಿದೆ.(ಏಜೆನ್ಸೀಸ್​)