ನ್ಯೂಸ್

BiggBoss Kannada S10: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಮೊದಲ ವಾರದ ಕಿಚ್ಚನ ಜತೆ ಕಾರ್ಯಕ್ರಮಕ್ಕೆ ಆಗಮಿಸಿದ ನಟ, ನಿರೂಪಕ ಕಿಚ್ಚ ಸುದೀಪ್, ಪಂಚಾಯಿತಿ ಕಟ್ಟೆಗೆ ಹ್ಯಾಂಡ್‌ಸಮ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮನೆಯ ಸದಸ್ಯರು ಸೇರಿದಂತೆ ವೀಕ್ಷಕರ ಗಮನ ಸೆಳೆದರು.

ವಾರದ ಕಥೆಯಲ್ಲಿ ಮೂವರು ಸ್ಪರ್ಧಿಗಳನ್ನು ಸೇಫ್ ಮಾಡಿದ ಕಿಚ್ಚ, ಸೂಪರ್​ ಸಂಡೇ ವಿತ್​ ಸುದೀಪ್​ ಸಂಚಿಕೆಯಲ್ಲಿ ಉಳಿದ ಐವರಲ್ಲಿ ಸ್ನೇಕ್​ ಶ್ಯಾಮ್​ ಅವರ ಹೆಸರನ್ನು ತೆಗೆದುಕೊಳ್ಳುವ ಮೂಲಕ ಮನೆಯಿಂದ ಹೊರನಡೆಯುವ ಮೊದಲ ಸ್ಪರ್ಧಿ ಎಂದು ಘೋಷಿಸಿದರು.

ಭಾನುವಾರ ನಡೆದ ‘ಸೂಪರ್ ಸಂಡೆ ಸುದೀಪ್ ಜೊತೆ’ ಕಾರ್ಯಕ್ರಮದಲ್ಲಿ ಬಿಗ್​ ಸ್ಪರ್ಧಿಗಳೊಟ್ಟಿಗೆ ಮಾತುಕತೆಗೆ ಇಳಿದ ಸುದೀಪ್, ಸಂಚಿಕೆಯನ್ನು ಹಾಸ್ಯದಿಂದ ಪ್ರಾರಂಭಿಸಿ, ನಗುತ್ತಲೇ ಹೇಳಬೇಕಾದ ಮಾತುಗಳನ್ನು ಸ್ಪಷ್ಟವಾಗಿ ತಿಳಿ ಹೇಳಿದರು. ಒಂದು ವಾರದಲ್ಲಿ ಮನೆ ಮಂದಿ ಮತ್ತು ವೀಕ್ಷಕರು ನೋಡಿರದ ಪ್ರತಾಪ್ ಅನ್ನು ಕಿಚ್ಚ ಎಲ್ಲರಿಗೂ ಪರಿಚಯಿಸಿದರು.

ಸೂಟ್​ ಹಾಕಿಕೊಂಡು ಸ್ಟೈಲಿಶ್ ಆಗಿ ಮಿಂಚಿದ ಪ್ರತಾಪ್​, ಸಂಗೀತ ಶೃಂಗೇರಿ ಮತ್ತು ತನಿಷಾ ಜತೆಗೆ ರ್ಯಾಂಪ್​ ವ್ಯಾಕ್​ ಮಾಡಿದರು. ತದನಂತರ ಹಾಡಿಗೆ ಕುಣಿದು ಕುಪ್ಪಳಿಸಿ, ಸುದೀಪ್ ಅವರ ಮೆಚ್ಚುಗೆಗೆ ಪಾತ್ರರಾದರು. ಶನಿವಾರದಿಂದಲೂ ನಾಮಿನೇಷನ್ ಪಟ್ಟಿಯಲ್ಲಿ ಸಿಲುಕಿಕೊಂಡಿದ್ದ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು, ಡ್ರೋಣ್ ಪ್ರತಾಪ್ ಮನೆಯಿಂದ ಹೊರಹೋಗದೆ ನಾವು ಸೇಫ್ ಆಗ್ತೀವಾ ಎಂಬ ಯೋಚನೆಯಲ್ಲೇ ಕುಳಿತ್ತಿದ್ದರು. ಈ ಐವರಲ್ಲಿ ಮೊದಲು ಸೇಫ್‌ ಆಗಿದ್ದು ನೀತು.

ನಂತರದಲ್ಲಿ ಉಳಿದವರ ಪೈಕಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್​ನ ಮೊದಲ ಕಂಟೆಸ್ಟೆಂಟ್ ಆಗಿ ಸ್ನೇಕ್ ಶ್ಯಾಮ್ ಮನೆಯಿಂದ ಹೊರ ಹೋಗಿದ್ದಾರೆ. ಇದೀಗ ಉಳಿದ ಸ್ಪರ್ಧಿಗಳು ಸದ್ಯ ಕೊಂಚ ನಿರಾಳರಾಗಿದ್ದರೂ ಕೂಡ ಎರಡನೇ ವಾರದಲ್ಲಿ ಹೇಗೆ ಆಡಲಿದ್ದಾರೆ? ಮನೆಯ ವಾತಾವರಣದೊಂದಿಗೆ ಎಷ್ಟರ ಮಟ್ಟಿಗೆ ಹೊಂದಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.