ಅತ್ಯುತ್ತಮ ಕನ್ನಡ ಸಿನಿಮಾ ಹಾಗೂ ಅತ್ಯುತ್ತಮ ಆಡಿಯೋಗ್ರಫಿ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದ "ಡೊಳ್ಳು' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹೆಗ್ಗಳಿಕೆ ನಟ ಕಾರ್ತಿಕ್ ಮಹೇಶ್ಗೆ ಸಲ್ಲುತ್ತದೆ. ಆ ಬಳಿಕ ಕೆಲ ಧಾರಾವಾಹಿಗಳು, ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೆ "ಬಿಗ್ಬಾಸ್ ಕನ್ನಡ' ಸೀಸನ್ 10ರ ಗೆಲುವು ಹೊಸ ಅವಕಾಶಗಳಿಗೆ ವೇದಿಕೆ ಕಲ್ಪಿಸಿತ್ತು. ಇದೀಗ ಬ್ಯಾಕ್ ಟು ಬ್ಯಾಕ್ ನಾಲ್ಕು ಚಿತ್ರಗಳಲ್ಲಿ ಕಾರ್ತಿಕ್ ನಾಯಕನಾಗಿ ನಟಿಸುತ್ತಿದ್ದು, ಇನ್ನೊಂದು ಸಿನಿಮಾ ಘೋಷಣೆಯಾಗುವ ಹಂತದಲ್ಲಿದೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಕಾರ್ತಿಕ್ ಮಹೇಶ್ ಮಾತಿಗೆ ಸಿಕ್ಕಿದ್ದರು. "ಬಿ.ಎಂ. ಗಿರಿರಾಜ್ ನಿರ್ದೇಶಿಸುತ್ತಿರುವ "ರಾಮರಸ' ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ವಿಎಫ್ಎಕ್ಸ್ ಇರುವ ಕಾರಣ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. "ರಿಚಿ ರಿಚ್' ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮತ್ತೊಂದು ಸಿನಿಮಾ "ಸೀತಾರಾಮರಾಜು' ಶೂಟಿಂಗ್ ಮಳೆಗಾಲದಲ್ಲಿ ಪ್ರಾರಂಭವಾಗಲಿದ್ದು, ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಪನ್ನಗಾಭರಣ ನಿರ್ದೇಶಿಸುತ್ತಿರುವ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದರ ಬಗ್ಗೆ ಚಿತ್ರತಂಡದಿಂದಲೇ ಅಧಿಕೃತವಾಗಿ ಘೋಷಣೆಯಾದರೆ ಉತ್ತಮ. ಈ ಚಿತ್ರಗಳ ಪೈಕಿ ಎಲ್ಲವೂ ಅಂದುಕೊಂಡಂತಾದರೆ "ರಾಮರಸ' ಮತ್ತು "ಸೀತಾರಾಮರಾಜು' ಇದೇ ವರ್ಷ ರಿಲೀಸ್ ಆಗುವ ನಿರೀೆಯಿದೆ' ಎಂದು ಮಾಹಿತಿ ನೀಡುತ್ತಾರೆ ಕಾರ್ತಿಕ್ ಮಹೇಶ್.
ಎಲ್ಲ ಜಾನರ್ನಲ್ಲೂ ನಟಿಸಬೇಕು
ಕಾರ್ತಿಕ್ ಮಹೇಶ್ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದರೂ, ಎಲ್ಲ ಸಿನಿಮಾಗಳ ಜಾನರ್ ಕೂಡ ಒಂದಕ್ಕಿಂತ ಒಂದು ಭಿನ್ನ. "ಒಬ್ಬ ನಟನಾಗಿ ಎಲ್ಲ ಜಾನರ್ಗಳಲ್ಲಿ ನಟಿಸಬೇಕು, ಪ್ರಯೋಗ ಮಾಡಬೇಕು ಎಂಬುದು ನನ್ನಾಸೆ. "ರಾಮರಸ' ಥ್ರಿಲ್ಲರ್ ಸಿನಿಮಾ. ನಾನಿಲ್ಲಿ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ್ಯಾಮಿಲಿ ಡ್ರಾಮಾ ಜಾನರ್ನ "ರಿಚಿ ರಿಚ್'ನಲ್ಲಿ ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಪನ್ನಗಾಭರಣ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಔಟ್ ಆ್ಯಂಡ್ ಔಟ್ ಕಲ್ಟ್ ಕಾಮಿಡಿ ಕಂಟೆಂಟ್ ಇದೆ. ಇನ್ನು "ಸೀತಾರಾಮರಾಜು' ಲವ್ಸ್ಟೋರಿ. ಮೊದಲ ಬಾರಿಗೆ ಲವರ್ ಬಾಯ್ ರೀತಿಯ ಪಾತ್ರದಲ್ಲಿ ನಟಿಸಲಿದ್ದೇನೆ. ಹಾಗೇ ಮೊದಲ ಬಾರಿ ರೊಮ್ಯಾಂಟಿಕ್ ಸಾಂಗ್ ಇರಲಿದೆ' ಎಂದು ಹೇಳಿಕೊಳ್ಳುತ್ತಾರೆ.
ಒಟಿಟಿ ಬೇಕು, ಪರಭಾಷೆ ಬೇಡ
"ಪರಭಾಷೆಗಳಲ್ಲಿ ನಟಿಸುವ ಬಗ್ಗೆ ಯೋಚಿಸಿಲ್ಲ' ಎನ್ನುವ ಕಾರ್ತಿಕ್, "ಮೊದಲು ನನ್ನ ಜನ ನನ್ನನ್ನು ಗುರುತಿಸಿ, ಇವನಿಗೆ ಎರಡು ತಾಸು ಸಮಯ ಕೊಡಬೇಕು ಅಂತ ನನಗಾಗಿ ಥಿಯೇಟರ್ಗೆ ಬರಬೇಕು. ಆ ಬಳಿಕ ಬೇರೆ ಭಾಷೆಗೆ ಹೋಗುವ ಬಗ್ಗೆ ಯೋಚಿಸುತ್ತೇನೆ' ಎನ್ನುತ್ತಾರೆ. ಹಾಗೇ, ಅವರಿಗೆ ವೆಬ್ಸರಣಿಯಲ್ಲೂ ಅವಕಾಶ ಬಂದಿತ್ತಂತೆ. ಆದರೆ, "ಆಗ ಮೂರು ಚಿತ್ರಗಳನ್ನು ಒಪ್ಪಿದ್ದೆ. ಲುಕ್ಸ್ ಮತ್ತು ಡೇಟ್ಸ್ ಹೊಂದಿಸುವುದು ಕಷ್ಟ ಅಂತ ಒಪ್ಪಿಕೊಳ್ಳಲಿಲ್ಲ. ಒಟಿಟಿ ಕೂಡ ಒಳ್ಳೆ ವೇದಿಕೆಯೇ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ' ಎನ್ನುತ್ತಾರೆ.