ನ್ಯೂಸ್

ಕೋರ್ಟ್‌ಗೆ ಹಾಜರಾದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ

ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿಯಿಂದ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂ. ಪಡೆದು ವಂಚಿಸಿದ್ದ ಪ್ರಕರಣ ಸಂಬಂಧ ಹಿಂದೂ ಸಂಘಟನೆ ಕಾರ್ಯಕರ್ತೆ, ಬಿಗ್‌ಬಾಸ್ ಸ್ಫರ್ಧಿ ಚೈತ್ರಾ ಕುಂದಾಪುರ ಸೇರಿ ಮೂವರು ಆರೋಪಿಗಳು ಮಂಗಳವಾರ ೧ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನಗರದ ೧ ನೇ ಎಸಿಎಂಎಂ ಕೋರ್ಟ್ ೨೦೨೫ರ ಜ.೧೩ರಂದು ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ.

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚೈತ್ರಾ ಸೇರಿ ಮೂವರು ಆರೋಪಿಗಳಿಗೆ ಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಈ ಬೆನ್ನಲ್ಲೇ ನ್ಯಾಯಾಯಲಕ್ಕೆ ಆರೋಪಿಗಳು ಬಂದಿದ್ದರು. ಸದ್ಯ ಚೈತ್ರಾ ಬಿಗ್‌ಬಾಸ್-೧೧ರ ಸ್ಪರ್ಧಿಯಾಗಿದ್ದಾರೆ. ಹೀಗಾಗಿ ನೋಟಿಸ್ ಸಂಬಂಧ ಬಿಗ್‌ಬಾಸ್ ಮನೆಯಿಂದ ನೇರವಾಗಿ ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ಮುಗಿದ ಬಳಿಕ ನೇರವಾಗಿ ಬಿಗ್‌ಬಾಸ್‌ಗೆ ತೆರಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ಮೂಲದ ಹೋಟೆಲ್ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ವಂಚನೆ ಪ್ರಕರಣದ ಸಂಬಂಧ ಬೆಂಗಳೂರಿನ ಬಂಡೆಪಾಳ್ಯ ಠಾಣೆಯಲ್ಲಿ ಚೈತ್ರಾ ಹಾಗೂ ತಂಡದ ವಿರುದ್ಧ ಕಳೆದ ವರ್ಷ ಸೆ.೮ರಂದು ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಚೈತ್ರಾ ಮತ್ತು ತಂಡವನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದರು.