ಮ್ಯಾಮ್ಕೋಸ್ ಚುನಾವಣೆಯಲ್ಲಿ ಗೆದ್ದ ಸಹಕಾರ ಭಾರತಿ ತಂಡದ ನಿರ್ದೇಶಕರನ್ನು ಬೆಂಬಲಿಗರು ಸನ್ಮಾನಿಸಿದರು.  
ನ್ಯೂಸ್

ಮ್ಯಾಮ್ಕೋಸ್‌ನಲ್ಲಿ ಸಹಕಾರ ಭಾರತಿಗೆ ಭರ್ಜರಿ ಗೆಲುವು

ಶಿವಮೊಗ್ಗ: ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮ್ಯಾಮ್ಕೋಸ್ (ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ)ನಲ್ಲಿ ಸಹಕಾರ ಭಾರತಿಯ ಪಾರುಪತ್ಯ ಮುಂದುವರಿದಿದೆ. ಎಲ್ಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸತತ ಐದನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನಕ್ಕೆ ಮತ್ತೊಮ್ಮ ಮುಖಭಂಗವಾಗಿದೆ.

ಕೀರ್ತಿರಾಜ ಕಾನಳ್ಳಿ ಅತಿ ಹೆಚ್ಚು 5,497 ಮತಗಳನ್ನು ಪಡೆದು ಎರಡನೇ ಬಾರಿ ಗೆಲುವಿನ ನಗೆ ಬೀರಿದರೆ, ಹಾಲಿ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ 5,374 ಮತಗಳನ್ನು ಪಡೆಯುವ ನಾಲ್ಕನೇ ಬಾರಿ ಗೆಲುವು ದಾಖಲಿಸಿದರು. ಗೆದ್ದವರಲ್ಲಿ ಮೂವರು ಸತತ 4ನೇ ಬಾರಿ ಜಯ ಸಾಧಿಸಿದರೆ, ಜಯಶ್ರಿ ಕಡಗೋಡು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 5 ಮಂದಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಎಲ್ಲ 10 ಮಂದಿಯೂ ಗೆದ್ದಿರುವುದು ಸಹಕಾರ ಭಾರತಿಯ ಸಾಮರ್ಥ್ಯಕ್ಕೆ ನಿದರ್ಶನ.

2020ರ ಚುನಾವಣೆಯಲ್ಲಿ 19 ಅಭ್ಯರ್ಥಿಗಳ ಪೈಕಿ 9 ಮಂದಿ ಹೊಸಬರನ್ನು ಕಣಕ್ಕಿಳಿಸಿದ್ದ ಸಹಕಾರ ಭಾರತಿ ಅವರೆಲ್ಲರನ್ನೂ ಗೆಲ್ಲಿಸಿಕೊಂಡಿತ್ತು. ಈ ಚುನಾವಣೆಯಲ್ಲಿ 10 ಮಂದಿ ಹೊಸಬರನ್ನೂ ಗೆಲ್ಲಿಸಿಕೊಳ್ಳುವಲ್ಲಿ ಸಫಲವಾಗಿದೆ. ಸತತ 4ನೇ ಬಾರಿಗೆ ಬಹುತೇಕ ಸದಸ್ಯರು ಹಳೇ ಆಡಳಿತ ಮಂಡಳಿಯತ್ತಲೇ ಒಲವು ತೋರಿರುವುದು ಸ್ಪಷ್ಟವಾಗಿದೆ. ಇದರೊಂದಿಗೆ ಮ್ಯಾಮ್ಕೋಸ್‌ನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಬೇಕೆಂದು ಬಯಸಿದ್ದ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಪ್ರಮುಖರ ಕನಸು ಭಗ್ನವಾಗಿದೆ.

ಫೆ.4ರ ಸಂಜೆ 4ಕ್ಕೆ ಮತದಾನ ಮುಕ್ತಾಯವಾಗಿತ್ತು. ಮೂರು ಜಿಲ್ಲೆಗಳ ಎಲ್ಲ ಮತಗಟ್ಟೆಗಳಿಂದ ಮತ ಪೆಟ್ಟಿಗೆ ಶಿವಮೊಗ್ಗದ ಮ್ಯಾಮ್ಕೋಸ್ ಕೇಂದ್ರ ಕಚೇರಿಗೆ ಬರುವಷ್ಟರಲ್ಲಿ ರಾತ್ರಿ 8 ಗಂಟೆಯಾಗಿತ್ತು. ರಾತ್ರಿ 10 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಬುಧವಾರ ಮುಂಜಾನೆ 6ಕ್ಕೆ ಮುಕ್ತಾಯವಾಯಿತು. ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ರವಿಚಂದ್ರ ನಾಯಕ್ ಚುನಾವಣಾಧಿಕಾರಿ, ಶಿವಮೊಗ್ಗದ ತಹಸೀಲ್ದಾರ್ (ಗ್ರೇಡ್-2) ಎಂ.ಲಿಂಗರಾಜು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 100ಕ್ಕೂ ಹೆಚ್ಚು ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಅಭ್ಯರ್ಥಿಗಳು ರಾತ್ರಿ ಪೂರ್ತಿ ನಿದ್ದೆ ಬಿಟ್ಟು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾದರು.