ಭಾನುವಾರ ಕೇಂದ್ರ ಸರ್ಕಾರ ಎರಡು ಮಹತ್ವದ ಸುಧಾರಣೆಗಳಿಗೆ ಅಡಿಯಿಟ್ಟಿದ್ದು, ಸ್ವಾವಲಂಬನೆಯ ಆಶಯಕ್ಕೆ ಬಲ ನೀಡುವ ಜತೆಗೆ ದೇಶದ ಆತ್ಮವಿಶ್ವಾಸವನ್ನೂ ಹೆಚ್ಚಿಸಲಿದೆ. ಒಂದು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ್ದಾದರೆ, ಮತ್ತೊಂದು ಕೃಷಿರಂಗ. ಈ ಎರಡೂ ಕ್ಷೇತ್ರಗಳ ಶಕ್ತಿ ಹೆಚ್ಚಿದರೆ ಖಂಡಿತವಾಗಿಯೂ ಅದರಿಂದ ಹಲವು ಪ್ರಯೋಜನಗಳಿವೆ. ವಿದೇಶಗಳಿಂದ ಆಮದಿಗೆ ಕಡಿವಾಣ ಹಾಕಿ, ದೇಶದಲ್ಲೇ ಉತ್ಪಾದನಾ ವಲಯವನ್ನು ಬಲ ಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಆತ್ಮನಿರ್ಭರ ಭಾರತ’ ಯೋಜನೆ ಪ್ರಾರಂಭಿಸಿರುವುದು ಗೊತ್ತೇ ಇದೆ. ಈ ಯೋಜನೆಯಡಿ ಒಂದೊಂದೇ ವಲಯ, ಇಲಾಖೆಗಳನ್ನು ತರಲಾಗುತ್ತಿದ್ದು, ಪ್ರಸಕ್ತ ರಕ್ಷಣಾ ಇಲಾಖೆಯ ಸರದಿ. ರಕ್ಷಣಾ ಉಪಕರಣಗಳ ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಬಂದೂಕು, ರೇಡಾರ್, ಲಘು ಯುದ್ಧ ಹೆಲಿಕಾಪ್ಟರ್, ಸೇರಿ 101 ರಕ್ಷಣಾ ಉಪಕರಣಗಳ ಆಮದಿನ ಮೇಲೆ ನಿರ್ಬಂಧ ಹೇರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.
ಆಮದು ಮೇಲಿನ ನಿರ್ಬಂಧವನ್ನು 2022ರಿಂದ 2024ರ ಅವಧಿಯಲ್ಲಿ ಹಂತಹಂತವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ರಕ್ಷಣಾ ಕೈಗಾರಿಕೆಗಳಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ‘ಆತ್ಮನಿರ್ಭರ ಭಾರತಕ್ಕೆ ದೊಡ್ಡ ಮಟ್ಟಿನ ಪ್ರೋತ್ಸಾಹ ನೀಡಲು ರಕ್ಷಣಾ ಸಚಿವಾಲಯ ಸಿದ್ಧವಿದೆ. ಆಮದು ನಿರ್ಬಂಧ ನಿಟ್ಟಿನಲ್ಲಿ 101 ಉಪಕರಣಗಳ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದೂ ಸಚಿವರು ಹೇಳಿದ್ದು, ರಕ್ಷಣಾ ಕೈಗಾರಿಕಾ ವಲಯಕ್ಕೆ ಭಾರಿ ವಿಶ್ವಾಸ ಮೂಡಿಸಿದೆ.
ಕೃಷಿ ರಂಗಕ್ಕೆ ಮೂಲಸೌಕರ್ಯದ ಕೊರತೆ ನಿವಾರಿಸಬೇಕು ಎಂಬ ಆಗ್ರಹ ಬಹು ಕಾಲದ್ದು. ಕರೊನಾ ಆರ್ಥಿಕ ಸಂಕಷ್ಟದಿಂದ ಹೊರಬರಲು ಕೇಂದ್ರ ಸರ್ಕಾರ ಇತ್ತೀಚೆಗೆ -ಠಿ; 20 ಲಕ್ಷ ಕೋಟಿಗಳ ಪ್ಯಾಕೇಜ್ ಪ್ರಕಟಿಸಿತ್ತು. ಇದರ ಭಾಗವಾಗಿಯೇ, ಕೃಷಿ ಮೂಲಸೌಕರ್ಯ ನಿಧಿಗೆ -ಠಿ; 1 ಲಕ್ಷ ಕೋಟಿ ಒದಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಈ ಕೃಷಿ ಮೂಲಸೌಕರ್ಯ ನಿಧಿಗೆ ಚಾಲನೆ ನೀಡಿದರು. ಬೆಳೆಗಳ ಕಟಾವು, ಮಾರಾಟ, ಸಂಗ್ರಹವಲ್ಲದೆ, ಆಧುನಿಕ ಕೃಷಿ ಉಪಕರಣಗಳನ್ನು ಖರೀದಿಸಲು ಈ ಯೋಜನೆಯಿಂದ ರೈತರಿಗೆ ನೆರವಾಗಲಿದೆ. ಈ ನಿಧಿಯಿಂದ ರೈತರು ಸಾಲ ಪಡೆಯಬಹುದಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ವರ್ಷ -ಠಿ; 10 ಸಾವಿರ ಕೋಟಿ ಅನುದಾನ ಬಿಡುಗಡೆ ಆಗಲಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ದೇಶದ 8.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ -ಠಿ; 17,100 ಕೋಟಿ ಆರನೇ ಕಂತಿನ ಭಾಗವಾಗಿ ವರ್ಗಾವಣೆ ಮಾಡಲಾಗಿದೆ. ಮುಂಗಾರು ಬಿತ್ತನೆ ಮುಗಿದು, ರೈತರಿಗೆ ಕೃಷಿವೆಚ್ಚಗಳು ಹೆಚ್ಚಿರುವ ಈ ಸಂದರ್ಭದಲ್ಲೇ ನೆರವು ಬಿಡುಗಡೆ ಆಗಿರುವುದು ಸಮಯೋಚಿತವಾಗಿದೆ.
ಪಾರದರ್ಶಕವಾಗಿ ಮತ್ತು ಅಷ್ಟೇ ದಿಟ್ಟವಾಗಿ ಇರಿಸಿದ ಹೆಜ್ಜೆಗಳು ಸಕಾರಾತ್ಮಕ ಮತ್ತು ಅಷ್ಟೇ ದೊಡ್ಡ ಪರಿಣಾಮವನ್ನು ಬೀರಬಲ್ಲವು ಎಂಬುದಕ್ಕೆ ಈ ಯೋಜನೆಗಳೇ ಸಾಕ್ಷಿ ಎನ್ನಬಹುದು.