ನ್ಯೂಸ್

ಸಿಎಂ ಸಿದ್ದರಾಮಯ್ಯಗೆ ದೊಡ್ಡ ಹಿನ್ನಡೆ: ವಿಜಯೇಂದ್ರ ಅಭಿಮತ | Attempt to cover up MUDA scam

ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್ ಕೊಟ್ಟಿದ್ದು ರಾಜಕೀಯ ಪ್ರೇರಿತವೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ನಿವೇಶನ ಹಂಚಿಕೆ ಅಕ್ರಮದ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ಪೊಲೀಸರಿಂದ ಬಿ. ರಿಪೋರ್ಟ್ ಹಾಕಿಸಿಕೊಂಡು ಅಕ್ರಮ ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ ಪ್ರಯತ್ನಿಸಿದ್ದರು.

ಆದರೆ ಈಗಿನ ಬೆಳವಣಿಗೆಯು ಸಿದ್ದರಾಮಯ್ಯ ಪ್ರಯತ್ನ ಹಿನ್ನಡೆ ಎಂದೇ ಹೇಳಬಹುದು. ಮುಡಾದ ಸಾವಿರಾರು ನಿವೇಶನಗಳು ಬಡವರಿಗೆ ಹಂಚಿಕೆಯಾಗುವ ಬದಲು ಅಕ್ರಮದ ಪಾಲಾಗಿದ್ದು, ಮೈತ್ರಿ ಪಕ್ಷದ ಮೈಸೂರು ಚಲೋ ಪಾದಯಾತ್ರೆ ತಾರ್ಕಿಕ ತಿರುವು ನೀಡಿದೆ ಎಂದರು.

ನಿವೇಶನಗಳ ಹಂಚಿಕೆ ಅಕ್ರಮದ ವಿರುದ್ಧ ಕಾನೂನು ಸಮರ ಮುಂದುವರಿದಿದೆ. ಮುಡಾ ಅಕ್ರಮದ ಬಲೆಯಿಂದ ಹೊರ ಬೀಳಲು ಬಯಸಿದ ನಾಯಕರ ಲೆಕ್ಕಾಚಾರ ಸದ್ಯಕ್ಕೆ ತಲೆಕೆಳಗಾಗಿದೆ ಎಂದು ವಿಶ್ಲೇಷಿಸಿದರು.

ಡಿಕೆಶಿ ಮೊಗದಲ್ಲಿ ಮಂದಹಾಸ

ಇ.ಡಿ. ನೋಟಿಸ್ ನೀಡಿದ್ದು ರಾಜಕೀಯ ಪ್ರೇರಿತವೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲ್ನೋಟಕ್ಕೆ ಹೇಳಿದ್ದರೂ ಅವರ ಮೊಗದಲ್ಲಿ ಮಂದಹಾಸ ಕಾಣುತ್ತಿದೆ. ಅಬ್ಬಾ, ಸಿದ್ದರಾಮಯ್ಯ ಕುಟುಂಬಕ್ಕೆ ಇ.ಡಿ. ನೋಟಿಸ್ ಕೊಟ್ಟಿದೆ ಎಂಬ ಸಂತೋಷ ಅವರ ಮುಖದಲ್ಲಿತ್ತು ಎಂದು ಬಿ.ವೈ.ವಿಜಯೇಂದ್ರ ಕಾಲೆಳೆದರು.