ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣ ಹಾಗೂ ದರ್ಶನ್, ಶಿವಣ್ಣ, ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಲ್ಲಿ ಮಡೆನೂರು ಮನು ಅವರನ್ನು ಕನ್ನಡ ಕಿರುತೆರೆ ಹಾಗೂ ಹಿರಿ ತೆರೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬ್ಯಾನ್ ಮಾಡಿತ್ತು. ಆದರೆ ಇದೀಗ ಆ ನಿಷೇಧವನ್ನು ತೆರವು ಮಾಡಲಾಗಿದ್ದು, ಮಡೆನೂರು ಮನುಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಈಗಾಗಲೇ ಮನು ಬಹಿರಂಗವಾಗಿ ಮೂವರು ಸ್ಟಾರ್ಸ್‌ಗೆ ಕ್ಷಮೆ ಕೇಳಿದ್ದಾರೆ. ಮನು ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾಯಶ್ಚಿತ್ತ, ಪಾಪಪ್ರಜ್ಞೆ ಅವರಿಗೆ ಕಾಡಿದೆ. ಈ ಕ್ಷಮಾಪಣೆಯ ಕಾಗದ ನೀಡಿದ್ದಾರೆ. ಬಹಿರಂಗವಾಗಿ ಅವರು ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಿ ಅಂತ ಅವರು ಮನವಿ ಮಾಡಿದ್ದಾರೆ. ಅದನ್ನು ಪುರಸ್ಕರಿಸುತ್ತೇವೆ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.
ಚಿತ್ರರಂಗದಿಂದ ಮನುರನ್ನ ಬ್ಯಾನ್ ಮಾಡಬೇಕು ಎಂದು ಅಭಿಮಾನಿಗಳಿಂದ ಒತ್ತಾಯ ಕೇಳಿಬಂದಿತ್ತು. ಆದರೆ ಈಗ ಮನು ಅವರಿಗೆ ರಿಲೀಫ್ ಸಿಕ್ಕಿದೆ. ಅವರ ಕ್ಷಮಾಪಣೆ ಪತ್ರವನ್ನು ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸ್ವೀಕರಿಸಿದ್ದಾರೆ. ಮಡೆನೂರು ಮನು ಕ್ಷಮೆ ಕೇಳಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಅವಕಾಶ ನೀಡುವುದಾಗಿ ಉಮೇಶ್ ಬಣಕಾರ್ ಹೇಳಿದ್ದಾರೆ.
(ಏಜೆನ್ಸೀಸ್)
ಸ್ಟಾರ್ ನಟರ ವಿರುದ್ಧ ಮನಬಂದಂತೆ ಮಾತನಾಡಿದ ಆರೋಪದಲ್ಲಿ ಮನು ವಿರುದ್ಧ ಹಲವು ದೂರುಗಳು ಕೇಳಿಬಂದಿದ್ದವು. ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಇತ್ತೀಚೆಗೆ ಹೊರ ಬಂದ ಬಳಿಕ ಮಾತನಾಡಿದ್ದ ನಟ ಮನು, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದರು. 'ಆ ಆಡಿಯೋ ನನ್ನದಲ್ಲ. ನನ್ನ ಸಿನಿಮಾ ಬರುವ ಹೊತ್ತಲ್ಲೇ ಈ ಆಡಿಯೋ ಹರಿಬಿಟ್ಟು ನನ್ನ ಮೇಲೆ ಷಡ್ಯಂತ್ರ ಮಾಡಿದ್ದಾರೆ. ಶಿವಣ್ಣನ ದೊಡ್ಡವರು. ನಾನು ಅವರ ಬಗ್ಗೆ ಆ ರೀತಿ ಮಾತನಾಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ನಾನೇ ಖುದ್ದಾಗಿ ಶಿವಣ್ಣ ಅವರನ್ನು ಭೇಟಿಯಾಗಿ ಕ್ಷಮೆ ಕೇಳುತ್ತೇನೆ' ಎಂದು ಮನು ಹೇಳಿಕೊಂಡಿದ್ದರು.