ನವದೆಹಲಿ: ಲಘು ಮೋಟಾರು ವಾಹನದ (ಎಲ್ಎಂವಿ) ಚಾಲನಾ ಪರವಾನಗಿ ಹೊಂದಿ ರುವ ವ್ಯಕ್ತಿಯೂ 7,500 ಕೆಜಿಗಿಂತ ಹೆಚ್ಚು ಭಾರವಿಲ್ಲದ ಸಾರಿಗೆ ವಾಹನ ಚಲಾಯಿಸಲು ಅರ್ಹನಾಗಿದ್ದಾನೆ ಎಂದು ಸುಪ್ರೀಂಕೋರ್ಟ್ ಬುಧವಾರ ತೀರ್ಪು ನೀಡಿದೆ. ಇದರಿಂದಾಗಿ, ವಾಣಿಜ್ಯ ವಾಹನ ಚಾಲಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಈ ತೀರ್ಪು ನೀಡಿದೆ. ನಿರ್ದಿಷ್ಟ ತೂಕದ ಸಾರಿಗೆ ವಾಹನಗಳು ಅಪಘಾತಗಳಿಗೆ ತುತ್ತಾಗಿದ್ದಾಗ, ಕಾನೂನು ನಿಯಮಗಳನ್ವಯ ಅವುಗಳನ್ನು ಚಲಾಯಿಸಲು ಚಾಲಕರಿಗೆ ಅನುಮತಿ ಇರಲಿಲ್ಲ ಎಂಬ ನೆಪವೊಡ್ಡಿ ವಾಹನ ಮಾಲೀಕರ ವಿಮಾ ಕ್ಲೈಮ್ಗಳಮನ್ನು ತಿರಸ್ಕರಿಸುತ್ತಿದ್ದ ವಿಮಾ ಕಂಪನಿಗಳಿಗೆ ಈ ತೀರ್ಪು ಆಘಾತ ತಂದಿದೆ.
ದೇಶದಲ್ಲಿ ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಎಲ್ಎಂವಿ ಡ್ರೖೆವಿಂಗ್ ಲೈಸೆನ್ಸ್ ಹೊಂದಿರುವ ವರು ಕಾರಣ ಎಂಬುದಕ್ಕೆ ಯಾವುದೇ ಪ್ರಾಯೋಗಿಕ ಡೇಟಾ ಇಲ್ಲ. ಎಲ್ಎಂವಿ ಚಾಲನಾ ಪರವಾನಗಿ ಹೊಂದಿರುವವರ ಕುಂದು ಕೊರತೆಗಳನ್ನು ತಾಂತ್ರಿಕ ಆಧಾರದ ಮೇಲೆ ತಿರಸ್ಕರಿಸಲಾಗುವುದಿಲ್ಲ. ಅವರು ಸಾಕಷ್ಟು ಸಮಯದಿಂದ ನ್ಯಾಯಾಲಯದ ಉತ್ತರವನ್ನು ನಿರೀಕ್ಷಿಸುತ್ತಿದ್ದರು ಎಂದು ಸರ್ವಾನುಮತದ ತೀರ್ಪು ಬರೆದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ದಾಖಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾ ಪಿ.ಎಸ್ ನರಸಿಂಹ, ನ್ಯಾ. ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಕೂಡ ಪೀಠದಲ್ಲಿದ್ದರು.
ಕೇಂದ್ರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದಿಸಿ, 1988ರ ಮೋಟಾರು ವಾಹನಗಳ (ಎಂವಿ) ಕಾಯ್ದೆಗೆ ತಿದ್ದುಪಡಿ ತರುವ ಸಮಾಲೋಚನೆಗಳು ಬಹುತೇಕ ಪೂರ್ಣಗೊಂಡಿವೆ ಎಂದಿದ್ದರು. ಆಗಸ್ಟ್ 21ರಂದು ನ್ಯಾಯಪೀಠ ತನ್ನ ತೀರ್ಪನ್ನು ಕಾದಿರಿಸಿತ್ತು. ಕಾನೂನಿಗೆ ತಿದ್ದುಪಡಿ ತರುವ ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ತೀರ್ಪಿನಲ್ಲಿ ಸೂಚಿಸಿದೆ. ಲಘು ಮೋಟಾರು ವಾಹನದ (ಎಲ್ಎಂವಿ) ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು 7,500 ಕೆಜಿಗಿಂತ ಹೆಚ್ಚಿಲ್ಲದ ಭಾರವಿಲ್ಲದ ಸಾರಿಗೆ ವಾಹನವನ್ನು ಓಡಿಸಲು ಅರ್ಹರೇ ಎಂಬ ಕಾನೂನು ಪ್ರಶ್ನೆಗೆ ಪೀಠ ಸ್ಪಷ್ಟ ಉತ್ತರ ನೀಡಿದೆ.
ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಬಾಲಕನಿಗೆ ದೆಹಲಿಯ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸದ್ಯದ ಸ್ಥಿತಿಯಲ್ಲಿ ಆತನನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆತನ ಸುಧಾರಣೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಪರಾಧ ಎಸಗುವ ಸಮಯದಲ್ಲಿ ಆರೋಪಿ ಸುಮಾರು 17 ವರ್ಷದವನಾಗಿದ್ದ. ಬಾಲಕಿಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ.
2017ರ ಜೂನ್ 4ರಂದು ಈ ಘಟನೆ ನಡೆದಿತ್ತು. ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಅಪಹರಣ ಮಾಡಿದ ಅಪರಾಧಕ್ಕಾಗಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಈ ಶಿಕ್ಷೆಯನ್ನು ಏಕಕಾಲದಲ್ಲಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಸಂತ್ರಸ್ತೆಗೆ 10.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಕೋರ್ಟ್ ಆದೇಶ ನೀಡಿದೆ. ಬಾಲಕ 79 ದಿನಗಳ ಕಾಲ ಆಶ್ರಯ ಕೇಂದ್ರದಲ್ಲಿ ಇದ್ದರೂ ಅವನ ವೈಯಕ್ತಿಕ ಆರೈಕೆ ಯೋಜನೆ (ಐಸಿಪಿ) ಮತ್ತು ಪುನರ್ವಸತಿ ಕಾರ್ಡ್ ಸಿದ್ಧಪಡಿಸಿಲ್ಲ.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಯಾವುದೇ ಅಧಿಕಾರಿಯು ಪ್ರಕರಣದಲ್ಲಿ ಕೆಲಸ ಮಾಡಿಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಇದು ಜುವೆನೈಲ್ ಜಸ್ಟೀಸ್ (ಜೆಜೆ) ವ್ಯವಸ್ಥೆಯ ವೈಫಲ್ಯ ತೋರಿಸುತ್ತದೆ. ಪುನರ್ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಅವ್ಯವಸ್ಥೆ, ಗೊಂದಲ ಮತ್ತು ಅನಿಶ್ಚಿತತೆ ಇದೆ. ಕಾಯಿದೆ ಮತ್ತು ಅದರ ನಿಯಮಗಳ ಅನುಸರಣೆಯ ಸಮಸ್ಯೆಗಳು, ಕಾರ್ಯವಿಧಾನದ ಅಸ್ಪಷ್ಟತೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲು್ಯಸಿಡಿ) ಕಾರ್ಯದರ್ಶಿಗೆ ನಿರ್ದೇಶಿಸಿದೆ.