Pakistan : ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಗ್ರರು ತವರು ಪಾಕಿಸ್ತಾನಕ್ಕೆ ತೀವ್ರ ಮುಖಭಂಗ ಉಂಟಾಗಿದೆ. ಕಾಶ್ಮೀರದ ಪಹಲ್ಗಾಮ್ ಮೇಲೆ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ.
ಪಾಕಿಸ್ತಾನ ತನ್ನ ಸಮರ್ಥನೆಯ ಭಾಗವಾಗಿ ಹೇಳಿದ ಹಲವು ಅಂಶಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ತಿರಸ್ಕರಿಸಿದವು. ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್-ಇ-ತೊಯ್ಬಾದ ಪಾತ್ರವಿದೆಯೇ? ಎಂದು ವಿಶ್ವಸಂಸ್ಥೆ ಪಾಕಿಸ್ತಾನವನ್ನು ಪ್ರಶ್ನಿಸಿತು. ನಿರ್ದಿಷ್ಟ ಧರ್ಮದವರನ್ನು ಗುರಿಯಾಗಿಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿರುವ ನಡೆಯ ವಿರುದ್ಧ ವಿಶ್ವಸಂಸ್ಥೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೆ, ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗಳ ಬಗ್ಗೆಯೂ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿತು. ಭಾರತಕ್ಕೆ ಪರಮಾಣು ಬಾಂಬ್ ಬೆದರಿಕೆ ಹಾಕಿರುವ ಕ್ರಮವನ್ನು ಸಹ ಟೀಕಿಸಿತು.
ಅಮಾಯಕರ ಮೇಲೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸದೆ, ಭಾರತ ತನ್ನ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪಾಕಿಸ್ತಾನ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿತು. ಸಿಂಧೂ ಜಲ ಒಪ್ಪಂದ ರದ್ದು ಸೇರಿದಂತೆ ಅನೇಕ ವಿಚಾರಗಳನ್ನು ವಿಶ್ವಸಂಸ್ಥೆಯ ಮುಂದಿಟ್ಟಿತು. ಆದರೆ, ಭಯೋತ್ಪಾದಕರ ಅಮಾನವೀಯ ಕೃತ್ಯದ ಬಗ್ಗೆ ಒಂದು ಮಾತನ್ನು ಸಹ ಪಾಕ್ ಆಡಲಿಲ್ಲ.
ಇದೇ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಸಂಯಮದಿಂದ ವರ್ತಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದರು. ಆದರೆ, ಭದ್ರತಾ ಮಂಡಳಿಯ ರಹಸ್ಯ ಸಭೆ ಯಾವುದೇ ನಿರ್ಣಯವಿಲ್ಲದೆ ಕೊನೆಗೊಂಡಿತು.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಅನಿರೀಕ್ಷಿತ ಮಟ್ಟಕ್ಕೆ ಏರಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯನ್ನು ಶಮನಗೊಳಿಸಲು ಎರಡೂ ದೇಶಗಳು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆ ತನ್ನ ಪಾತ್ರವನ್ನು ನಿರ್ವಹಿಸಲು ಸಿದ್ಧವಾಗಿದೆ ಎಂದರು. ಸಮಸ್ಯೆಗಳಿಗೆ ಯುದ್ಧವೇ ಪರಿಹಾರವಲ್ಲ ಎಂದು ಬುದ್ಧಿ ಮಾತು ಹೇಳಿದರು.
ಸಶಸ್ತ್ರ ಸಂಘರ್ಷ ಭುಗಿಲೆದ್ದರೆ ಪರಿಸ್ಥಿತಿ ನಿಯಂತ್ರಣ ತಪ್ಪುತ್ತದೆ ಎಂದು ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿ ಭುಗಿಲೆದ್ದಿರುವ ಸಾರ್ವಜನಿಕ ಕೋಪ ಮತ್ತು ಆಕ್ರೋಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆ ಬರ್ಬರ ದಾಳಿಯನ್ನು ನಾನು ಮತ್ತೊಮ್ಮೆ ಖಂಡಿಸುತ್ತೇನೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಈ ರೀತಿ ನಾಗರಿಕರನ್ನು ಗುರಿಯಾಗಿಸುವುದು ಕ್ರೂರ. ಇದನ್ನು ಮಾಡಿದವರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದರು. (ಏಜೆನ್ಸೀಸ್)