ನ್ಯೂಸ್

ಸಣ್ಣ ಸಮುದಾಯಗಳ ಮೇಲೆ ರಾಜಕೀಯ ಪಕ್ಷಗಳ ದೊಡ್ಡ ಕಣ್ಣು|small communities

ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಣ್ಣ ಸಣ್ಣ ಸಮುದಾಯ(small communities)ಗಳತ್ತ ರಾಜಕೀಯ ಪಕ್ಷಗಳು ಕಣ್ಣು ಹಾಯಿಸಿವೆ.

ತಳಮಟ್ಟದಲ್ಲಿ ಸಣ್ಣ ಪುಟ್ಟ ಸಮುದಾಯಗಳನ್ನು ಕ್ರೋಢೀಕರಿಸಿ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ರಾಜಕೀಯ ಪಕ್ಷಗಳು ಹಳ್ಳಿ ಹಳ್ಳಿಗೂ ತಮ್ಮ ತಮ್ಮ ನೇತಾರರನ್ನು ಉಸ್ತುವಾರಿಯಾಗಿ ನೇಮಿಸಿವೆ.

ಸಾಮಾನ್ಯವಾಗಿ ಪ್ರಬಲ ಸಮುದಾಯಗಳು ಒಂದೊಂದು ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡಿರುವ ಕಾರಣ ಸಣ್ಣ ಸಮುದಾಯಗಳು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಸಣ್ಣ ಪುಟ್ಟ ಸಮುದಾಯಗಳತ್ತ ದೃಷ್ಟಿ ನೆಟ್ಟಿವೆ. ಸಣ್ಣ ಸಣ್ಣ ಸಮುದಾಯಗಳ ಮುಖಂಡರಿಗೆ ರಾಜಕೀಯ ಪಕ್ಷಗಳು ಮಣೆ ಹಾಕಿವೆ. ಈ ಸಮುದಾಯಗಳ ಸಂಘ-ಸಂಸ್ಥೆಗಳು, ಸಂಘಟನೆಗಳು, ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ವಿವಿಧ ಬೇಡಿಕೆ ಈಡೇರಿಕೆ, ಭರವಸೆ, ಆಮಿಷಗಳನ್ನು ಒಡ್ಡುವ ಪ್ರಯತ್ನಗಳೂ ನಡೆದಿವೆ.

ಶಿಗ್ಗಾವಿಯಲ್ಲಿ ಮುಸ್ಲಿಂ ಬಾಹುಳ್ಯ

ಶಿಗ್ಗಾವಿಯಲ್ಲಿ ಶೇ.27 ರಷ್ಟು ಮುಸ್ಲಿಂ ಮತಗಳಿವೆ. ಶೆ.22 ರಷ್ಟು ಲಿಂಗಾಯತ ಮತಗಳಿವೆ. ಬಳಿಕ ಕುರುಬ, ವಾಲ್ಮೀಕಿ, ಪರಿಶಿಷ್ಟ ಜಾತಿ (ಎಡಗೈ), ಲಂಬಾಣಿ, ಬೆಸ್ತ, ಭೋವಿ, ಮರಾಠ, ಒಬಿಸಿ, ಗಾಣಿಗ, ಜೈನ್, ಬ್ರಾಹ್ಮಣ, ಉಪ್ಪಾರ, ಸವಿತ ಸಮಾಜ, ಕ್ಷತ್ರೀಯ, ಗೊಲ್ಲ, ಮಡಿವಾಳ, ಕುಂಬಾರ ಹಾಗೂ ರೆಡ್ಡಿ ಸಮುದಾಯದ ಮತಗಳಿದ್ದು, ಅವುಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಪೈಪೋಟಿಗಿಳಿದಿವೆ.

ಸಂಡೂರಿನಲ್ಲಿ ‘ನಾಯಕ’ ನಿರ್ಣಾಯಕ

ಸಂಡೂರಿನಲ್ಲಿ ಪರಿಶಿಷ್ಟ ಪಂಗಡ(ನಾಯಕ) ಸಮುದಾಯದ ಮತಗಳ ಸಂಖ್ಯೆ ಹೆಚ್ಚಿದೆ. ಮುಸ್ಲಿಂ ಶೇ.10 ರಷ್ಟು ಮತ ಹೊಂದಿದ್ದು, ಸರಿಸುಮಾರು 30 ಸಾವಿರ ಮತಗಳಿವೆ. ಕುರುಬ ಶೇ.8 , ಪರಿಶಿಷ್ಟ ಜಾತಿ (ಎಡಗೈ), ಗೊಲ್ಲ, ಲಿಂಗಾಯತ, ಭೋವಿ, ಎಸ್‌ಸಿ ಬಲಗೈ, ಲಂಬಾಣಿ, ಮಡಿವಾಳ, ಉಪ್ಪಾರ, ಬಲಿಜ, ಮರಾಠ, ವಿಶ್ವಕರ್ಮ, ಬೆಸ್ತರು, ಗಾಣಿಗ, ಬ್ರಾಹ್ಮಣ, ಸವಿತಾ ಸಮಾಯ, ರೆಡ್ಡಿ, ಕುಂಬಾರ, ಆರ‌್ಯವೈಶ್ಯ, ಈಡಿಗ, ಕ್ಷತ್ರೀಯ ಮತ್ತು ಒಕ್ಕಲಿಗ ಸಮುದಾಯದ ಮತಗಳಿವೆ.

ಚನ್ನಪಟ್ಟಣದಲ್ಲಿ ಒಕ್ಕಲಿಗರ ಒಗ್ಗಟ್ಟು

ಚನ್ನಪಟ್ಟಣದಲ್ಲಿ ಒಕ್ಕಲಿಗ ಮತ ಬಾಹುಳ್ಯವಿದ್ದು, ಶೇ.13 ರಷ್ಟು ಎಸ್‌ಸಿ ಬಲಗೈ ಶೇ.13, ಮುಸ್ಲಿಂ ಶೇ.12.94, ಬೆಸ್ತ, ತಿಗಳ, ಕುರುಬ, ಎಸ್ಸಿ ಎಡಗೈ, ಅರಸು, ವಿಶ್ವಕರ್ಮ, ಭೋವಿ, ಲಿಂಗಾಯತ, ಬ್ರಾಹ್ಮಣ, ಮಡವಾಳ, ಗಾಣಿಗ ಸವಿತಾ ಸಮಾಜ, ಬಲಿಜ, ಕುಂಬಾರ, ಉಪ್ಪಾರ, ಆರ‌್ಯವೈಶ್ಯ ಮತ್ತು ಈಡಿಗ ಮತಗಳು ಸಣ್ಣ ಪ್ರಮಾಣದಲ್ಲಿದ್ದರೂ ಚುನಾವಣಾ ಲಿತಾಂಶದ ಮೇಲ ದೊಡ್ಡ ಪ್ರಭಾವ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಈ ಸಮುದಾಯಗಳನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಿವೆ.

5 ದಿನ ಬಹಿರಂಗ ಪ್ರಚಾರ

ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ಐದು ದಿನ ಮಾತ್ರ ಬಾಕಿ ಇದ್ದು, ರಾಜಕೀಯ ಪಕ್ಷಗಳು ಪ್ರಚಾರವನ್ನು ತೀವ್ರಗೊಳಿಸಿವೆ. ಚುನಾವಣೆ ಹತ್ತಿರುವಾಗುತ್ತಿರುವಂತೆಯೇ ಕದನ ಕಾದಾಟ, ಪ್ರಚಾರಕ್ಕೆ ಘಟಾನುಘಟಿಗಳ ಎಂಟ್ರಿ ಹೆಚ್ಚುತ್ತಿದೆ. ಚನ್ನಪಟ್ಟಣದಲ್ಲಂತೂ ದೇವೇಗೌಡರು ಎಂಟ್ರಿ ಕೊಟ್ಟ ಬಳಿಕವಂತೂ ಪ್ರಚಾರದ ಸುನಾಮಿಯೇ ಎದ್ದಿದೆ. ಅತ್ತ ಮೈತ್ರಿಕೂಟ, ಇತ್ತ ಕಾಂಗ್ರೆಸ್ ಪ್ರಚಾರವನ್ನು ಬಿರುಸುಗೊಳಿಸಿವೆ.