ನ್ಯೂಸ್

ಹಣಕಾಸು ಆಯೋಗದ ಮುಂದೆ ರಾಜ್ಯದ ದೊಡ್ಡ ಬೇಡಿಕೆ ಪಟ್ಟಿ

ಬೆಂಗಳೂರು: ಕೇಂದ್ರದ ಹದಿನಾರನೇ ಹಣಕಾಸು ಆಯೋಗದ ಮುಂದೆ ರಾಜ್ಯ ಸರ್ಕಾರ ಮಹತ್ವದ ಬೇಡಿಕೆ ಮುಂದಿಟ್ಟಿದ್ದು, ತೆರಿಗೆ ಹಂಚಿಕೆ ವಿಧಾನ ಬದಲಾವಣೆಗೆ ಒತ್ತಾಯಿಸಿದೆ. ಜತೆಗೆ ವಿವಿಧ ಬಾಬ್ತಿನಲ್ಲಿ ಒಂದು ಬಾರಿಗೆ ವಿಶೇಷ ಅನುದಾನ ಕೊಡಬೇಕೆಂದು ಆಗ್ರಹಿಸಿದೆ.
ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗಾರಿಯಾ ಮತ್ತು ತಂಡದ ಮುಂದೆ ಕರ್ನಾಟಕದ ಬೇಡಿಕೆಯನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು, ಈ ಹಿಂದಿನ ಆಯೋಗದಲ್ಲಿ ಆದ ವ್ಯತ್ಯಾಸಗಳು, ಮುಂದೆ ಆಗಬೇಕಾದ ಬದಲಾವಣೆ ಕುರಿತು ವಿಷಯ ಮಂಡಿಸಿದರು.
ಮುಖ್ಯವಾಗಿ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ 55586 ಕೋಟಿ ರೂ. ಬಂಡವಾಳ ಅಗತ್ಯವಿದೆ. ಇದರಲ್ಲಿ ಕೇಂದ್ರದಿಂದ 27793 ಕೋಟಿ ರೂ. ಅನುದಾನ ಒದಗಿಸಲಿ, ಕಲ್ಯಾಣ ಕರ್ನಾಟಕದ ಅಸಮತೋಲನ ನಿವಾರಣೆಗೆ 25 ಸಾವಿರ ಕೋಟಿ ರೂ. ಹೊಂದಾಣಿಕೆ ಅನುದಾನ ಕೊಡಿ, ಅತ್ಯಂತ ಸೂಕ್ಷ್ಮ ಪ್ರದೇಶ ಪಶ್ಚಿಮ ಘಟ್ಟ ವಲಯದಲ್ಲಿ ಪರಿಣಾಮಕಾರಿಯಾಗಿ ವಿಪತ್ತು ನಿರ್ವಹಣೆ, ಪರಿಹಾರ, ಪುನರ್ವಸತಿಗೆ 10 ಸಾವಿರ ಕೋಟಿ ರೂ. ಅನುದಾನ ಕಲ್ಪಿಸಿ ಎಂದು ಬೇಡಿಕೆ ಮುಂದಿಡಲಾಯಿತು.
ಹಾಗೆಯೇ, ರಾಜ್ಯಗಳ ತೆರಿಗೆದಾರರು, ತಮ್ಮ ತೆರಿಗೆಯ ಹಣ ಅವರ ಹಿತಕ್ಕಾಗಿ ಬಳಸುವುದನ್ನು ನಿರೀಕ್ಷಿಸುತ್ತಾರೆ. ಹೀಗಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳಿಗೆ ನೀಡುವ ಪ್ರೋತ್ಸಾಹಗಳ ಪರಿಣಾಮಗಳನ್ನು ಆಯೋಗ ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಆಯೋಗದ ಗಮನಕ್ಕೆ ತಂದರು.
15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡುವ ಪಾಲು 4.713 ಯಿಂದ 3.647 ಗೆ ತಗ್ಗಿದೆ. ಇದರಿಂದಾಗಿ 2021-26ರ 5 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ 68,275 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸಿಎಂ ವಿವರಿಸಿದರು.
ಕರ್ನಾಟಕಕ್ಕೆ ದೊರೆತ ಪಾಲಿನಲ್ಲಿ ಉಂಟಾದ ಇಷ್ಟು ದೊಡ್ಡ ಮೊತ್ತದ ಕಡಿತದ ಬಗ್ಗೆ ಹಣಕಾಸು ಆಯೋಗಕ್ಕೆ ಅರಿವಿದ್ದು, ರಾಜ್ಯಕ್ಕೆ 11495 ಕೋಟಿ ರೂ. ನಿರ್ದಿಷ್ಟ ಅನುದಾನ ಒದಗಿಸಲು ಶಿಫಾರಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಆಯೋಗದ ಈ ಶಿಫಾರಸ್ಸನ್ನು ಒಪ್ಪಿಕೊಂಡಿಲ್ಲ. ಆದ್ದರಿಂದ ಕರ್ನಾಟಕ ಈ ಅನುದಾನ ಪಡೆಯುವಲ್ಲಿಯೂ ವಂಚಿತವಾಗಿದೆ. ಈ ಎಲ್ಲಾ ಕಾರಣಗಳಿಂದ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 79770 ಕೋಟಿ ರೂ. ನಷ್ಟ ಉಂಟಾಗಿದೆ ಎಂದರು.
ಸಭೆ ನಡುವೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗಾರಿಯಾ, ಈವರೆಗೆ ನಾಲ್ಕು ರಾಜ್ಯಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕರ್ನಾಟವು ವಿಶೇಷ ರೀತಿಯಲ್ಲಿ ತನ್ನ ಅಭಿಪ್ರಾಯ, ಅಹವಾಲು ನೀಡಿದೆ. ಮುಖ್ಯವಾಗಿ ತೆರಿಗೆ ಹಂಚಿಕೆ ಮಾಡುವಾಗ ರಾಜ್ಯಗಳ ಪಾಲು ಹೆಚ್ಚಿಸಬೇಕೆಂದು ಕೋರಿಕೆ ಇಟ್ಟಿದೆ. ಯಾವ ಕಾರಣಕ್ಕೆ ಹೆಚ್ಚಿಸಬೇಕು ಹಾಗೂ ಸ್ವರೂಪ ಬದಲಿಸಲು ಸಲಹೆ ನೀಡಿದ ಎಂದು ವಿವರಿಸಿದರು.
ಸೆಸ್ ಹಾಗೂ ಸರ್ಚಾಜ್ ವಿಚಾರದಲ್ಲಿ ಕೇಂದ್ರದ ನಿಲುವು ಬದಲಾಗಬೇಕೆಂಬ ರಾಜ್ಯದ ಪ್ರಸ್ತಾವನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಚರ್ಚೆ ಇದೆ, ಇದರ ಬಗ್ಗೆ ಅಭಿಪ್ರಾಯ ಕೊಡುವುದು ಕಷ್ಟ. ಹಾಗೆಯೇ ಹಿಂದಿನ ಆಯೋಗದ ಕ್ರಮದಿಂದ ನಷ್ಟವಾಗಿದೆ ಎಂದು ಈಗ ನಷ್ಟ ಭರ್ತಿ ಮಾಡಿಕೊಡಲು ಅಸಾಧ್ಯ, ಅಂತಹ ವ್ಯವಸ್ಥೆ ಇಲ್ಲ ಎಂದರು.