ನ್ಯೂಸ್

ದೇಶದಲ್ಲಿನ ಕರೊನಾ ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ

ಕರಿಯಪ್ಪ ಅರಳಿಕಟ್ಟಿ

ನವದೆಹಲಿ: ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ 136 ದಿನಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸದ್ಯ 4.08 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಇವುಗಳ ಪ್ರಮಾಣ ಶೇಕಡ 4.26ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ 96.08 ಲಕ್ಷ ಪ್ರಕರಣಗಳು ವರದಿಯಾಗಿದ್ದು, 1.39 ಲಕ್ಷ ಮಂದಿ ಕರೊನಾಗೆ ಬಲಿಯಾಗಿದ್ದಾರೆ. 90.58 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಸದ್ಯ ಪ್ರತಿದಿನ ಸರಾಸರಿ 35 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಪ್ರಮಾಣ ಸರಾಸರಿ 500 ಆಗಿದೆ.

ಜಾಗತಿಕವಾಗಿ ಕರೊನಾ ಆರ್ಭಟ ಮತ್ತೆ ಮುಂದುವರಿದಿದ್ದು, ಪ್ರತಿದಿನ ಸರಾಸರಿ 7 ಲಕ್ಷ ಹೊಸ ಪ್ರಕರಣಗಳು ಹಾಗೂ 12 ಸಾವಿರ ಸಾವುಗಳು ವರದಿಯಾಗುತ್ತಿವೆ. ಬಹುತೇಕ ಪ್ರಕರಣಗಳು ಹಾಗೂ ಸಾವುಗಳು ಅಮೆರಿಕ ಮತ್ತು ಯುರೋಪ್​ನ ಹಲವು ರಾಷ್ಟ್ರಗಳಿಂದ ವರದಿಯಾಗುತ್ತಿವೆ. ಹೀಗಾಗಿ ಅಲ್ಲಿನ ಹಲವು ಕಡೆಗಳಲ್ಲಿ ಮತ್ತೆ ಲಾಕ್​ಡೌನ್ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜಾಗತಿಕವಾಗಿ ಪ್ರಕರಣಗಳ ಸಂಖ್ಯೆ 6.62 ಕೋಟಿಗೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 15.23 ಲಕ್ಷಕ್ಕೇರಿದೆ. 4.57 ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ.

ಲಸಿಕೆ ಪಡೆದ ಸಚಿವರಿಗೇ ಕರೊನಾ!: ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ ಭಾಗಿಯಾಗಿ ಲಸಿಕೆಯ ಮೊದಲ ಡೋಸ್ ಪಡೆದಿದ್ದ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರಿಗೆ ಸೋಂಕು ತಗುಲಿದೆ. ಅವರನ್ನು ಅಂಬಾಲಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸಚಿವರೂ ಆಗಿರುವ ಅನಿಲ್ ವಿಜ್ ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ತಾವೇ ಮೊದಲ ಸ್ವಯಂ ಸೇವಕರಾಗುವುದಾಗಿ ಘೋಷಿಸಿದ್ದರು. ಕಳೆದ ನವೆಂಬರ್ 20ರಂದು ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆಯುವ ಮೂಲಕ ಇತರರಿಗೆ ಲಸಿಕೆಯ ಪ್ರಯೋಗಗಳಲ್ಲಿ ಭಾಗಿಯಾಗಲು ಕರೆ ನೀಡಿದ್ದರು. ಲಸಿಕೆ ಪಡೆದ ಬಳಿಕವೂ ಅವರಿಗೆ ಕರೊನಾ ತಗುಲಿರುವ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ್ ಬಯೋಟೆಕ್ ಸಂಸ್ಥೆ, ಇದು ಎರಡು ಡೋಸ್​ಗಳ ಲಸಿಕೆಯಾಗಿದ್ದು, ಎರಡನೇ ಲಸಿಕೆ ಪಡೆದ 14 ದಿನಗಳ ಬಳಿಕ ದೇಹದಲ್ಲಿ ಸೋಂಕಿನ ವಿರುದ್ಧದ ಪ್ರತಿಕಾಯಗಳು ಅಭಿವೃದ್ಧಿಯಾಗುತ್ತವೆ ಎಂದಿದೆ.

ರಷ್ಯಾದಲ್ಲಿ ಸಾಮೂಹಿಕ ಲಸಿಕೆ: ರಷ್ಯಾದ ಮಾಸ್ಕೊದಲ್ಲಿ ಸ್ಪುಟ್ನಿಕ್-ವಿ ಲಸಿಕೆಯ ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಮಾಸ್ಕೊದ 70 ಆಸ್ಪತ್ರೆಗಳಿಗೆ ಸ್ಪುಟ್ನಿಕ್-ವಿ ಲಸಿಕೆಗಳನ್ನು ಸರಬರಾಜು ಮಾಡಲಾಗಿದ್ದು, ಮೊದಲಿಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ. ಆದಾಗ್ಯೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು, ಗರ್ಭಿಣಿಯರು ಹಾಗೂ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವವರಿಗೆ ಲಸಿಕೆ ಪಡೆಯಲು ನಿರ್ಬಂಧ ವಿಧಿಸಲಾಗಿದೆ. ರಷ್ಯಾದ ಲಸಿಕೆಯ ಅಭಿವೃದ್ಧಿ ಹಾಗೂ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡ ವೇಗದ ಬಗ್ಗೆ ಜಾಗತಿಕ ತಜ್ಞರು ಈ ಮೊದಲಿನಿಂದಲೂ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಕರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ 8ನೇ ತರಗತಿವರೆಗಿನ ಎಲ್ಲ ಶಾಲೆಗಳನ್ನು ಮುಂದಿನ ವರ್ಷ ಮಾರ್ಚ್ 31ರವರೆಗೆ ಮುಚ್ಚುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದಾರೆ.