ವಾಟ್ಸಾಪ್ ವೆಬ್ ಬಳಕೆದಾರರಿಗೆ ಕೇಂದ್ರ ಸರ್ಕಾರ ವಾರ್ನ್​ 
ನ್ಯೂಸ್

WhatsApp Web ಬಳಕೆದಾರರಿಗೆ ಬಿಗ್ ಅಲರ್ಟ್! ಯಾಮಾರಿದ್ರೆ ನಿಮ್ಮ ಖಾಸಗಿ ಮಾಹಿತಿ ಆಗುತ್ತೆ ಲೀಕ್​

WhatsApp Web Alert: ವಾಟ್ಸಾಪ್ ವೆಬ್ ಬಳಸುವವರಿಗೆ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದೆ. ಆಫೀಸ್​ ಅಥವಾ ಸಾರ್ವಜನಿಕ ಕಂಪ್ಯೂಟರ್‌ಗಳಲ್ಲಿ ವಾಟ್ಸಾಪ್ ಖಾತೆಯನ್ನು ಲಾಗಿನ್ ಮಾಡಿದ ಬಳಿಕ ಸರಿಯಾಗಿ ಲಾಗ್‌ಔಟ್ ಮಾಡದೆ ಹೋದರೆ ಖಾಸಗಿ ಸಂದೇಶಗಳು, ಸಂಪರ್ಕ ಸಂಖ್ಯೆಗಳು ಮತ್ತು ಗ್ರೂಪ್ ಚಾಟ್‌ಗಳು ಬೇರೆಯವರ ಕೈಗೆ ಸಿಗುವ ಅಪಾಯವಿದೆ ಎಂದು ಎಚ್ಚರಿಸಿದೆ.

ಗೃಹ ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C)ನ ನ್ಯಾಷನಲ್ ಸೈಬರ್ ಕ್ರೈಂ ಥ್ರೆಟ್ ಅನಾಲಿಟಿಕ್ಸ್ ಯುನಿಟ್ (NCTAU) ಈ ಕುರಿತು ಸಲಹೆ ನೀಡಿದೆ.

ಸಕ್ರಿಯವಾಗಿರುವ ವಾಟ್ಸಾಪ್ ವೆಬ್ ಸೆಷನ್ ಅನ್ನು ದುರುದ್ದೇಶಪೂರಿತ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳಬಹುದು. ಇದರಿಂದ ಖಾಸಗಿ ಮಾಹಿತಿಗೆ ಅನಧಿಕೃತ ಪ್ರವೇಶ ಪಡೆಯುವುದಷ್ಟೇ ಅಲ್ಲದೆ, ಬಳಕೆದಾರರ ಹೆಸರಿನಲ್ಲಿ ವಂಚನೆ, ಫಿಶಿಂಗ್ ಸೇರಿದಂತೆ ವಿವಿಧ ಸೈಬರ್ ಅಪರಾಧಗಳನ್ನು ನಡೆಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.

ಹೀಗಾಗಿ ಕಚೇರಿ ಕಂಪ್ಯೂಟರ್, ಶೇರ್ ಮಾಡಿಕೊಳ್ಳುವ ಸಿಸ್ಟಮ್ ಅಥವಾ ಸಾರ್ವಜನಿಕ ಸಾಧನಗಳಲ್ಲಿ ವಾಟ್ಸಾಪ್ ಬಳಸಿದ ಬಳಿಕ ಕಡ್ಡಾಯವಾಗಿ ಲಾಗ್‌ಔಟ್ ಮಾಡಬೇಕು. ಕೇವಲ ಬ್ರೌಸರ್ ಟ್ಯಾಬ್ ಅಥವಾ ವಿಂಡೋ ಮುಚ್ಚಿದರೆ ಖಾತೆ ಲಾಗ್‌ಔಟ್ ಆಗುತ್ತದೆ ಎಂದು ಭಾವಿಸಬಾರದು ಎಂದು ಸೂಚಿಸಿದೆ.

ತಾತ್ಕಾಲಿಕವಾಗಿ ವಾಟ್ಸಾಪ್ ವೆಬ್ ಬಳಸಬೇಕಾದರೆ ನಂಬಿಕಸ್ಥ ಕಂಪ್ಯೂಟರ್‌ನಲ್ಲಿ ಇನ್‌ಕಾಗ್ನಿಟೊ ಅಥವಾ ಪ್ರೈವೇಟ್ ಬ್ರೌಸಿಂಗ್ ಆಯ್ಕೆ ಬಳಸಬಹುದು. ಆದರೆ ಬ್ರೌಸರ್ ಮುಚ್ಚುವ ಮುನ್ನ ಖಾತೆಯಿಂದ ಲಾಗ್‌ಔಟ್ ಮಾಡುವುದು ಕಡ್ಡಾಯ. ಸೈಬರ್ ಕೆಫೆ, ಹೋಟೆಲ್‌ಗಳ ಸಾರ್ವಜನಿಕ ಕಂಪ್ಯೂಟರ್ ಹಾಗೂ ಬೇರೆಯವರ ಕಂಪ್ಯೂಟರ್‌ಗಳಲ್ಲಿ ವಾಟ್ಸಾಪ್ ಲಾಗಿನ್ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡಿದೆ.

ಇದಲ್ಲದೆ, ಸರ್ಕಾರಿ, ಹಣಕಾಸು, ಸಂಸ್ಥೆಯ ಗೌಪ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಕಂಪ್ಯೂಟರ್‌ಗಳಲ್ಲಿನ ವಾಟ್ಸಾಪ್ ವೆಬ್ ಮೂಲಕ ಹಂಚಿಕೊಳ್ಳದಂತೆ ಎಚ್ಚರಿಸಿದೆ. ಸಂಸ್ಥೆಗಳು ಕೂಡ ಅಧಿಕೃತ ಹಾಗೂ ಸೂಕ್ಷ್ಮ ಕೆಲಸಗಳಿಗೆ ಇಂತಹ ಬಳಕೆಯನ್ನು ತಪ್ಪಿಸುವಂತೆ ಸೂಚಿಸಿದೆ.

ಇದನ್ನೂ ಓದಿ: Madhya Pradesh: ಹರಕೆ ತೀರಿಸಲು ಹೋಗಿ ಆನೆ ಕಾಲಲ್ಲಿ ಸಿಕ್ಕಿಕೊಂಡ ಭಕ್ತ! ಹೊರಬರಲಾಗದೆ ಪರದಾಟ

ನಿಮ್ಮ ಖಾತೆಯಿಂದ ನೀವು ಕಳುಹಿಸದ ಸಂದೇಶಗಳು ಹೋಗುವುದು ಅಥವಾ ಸಂಪರ್ಕಗಳಿಂದ ಅನಿರೀಕ್ಷಿತ ಪ್ರತಿಕ್ರಿಯೆಗಳು ಬರುವುದು ಕಂಡುಬಂದರೆ ತಕ್ಷಣ ಎಚ್ಚರಿಕೆ ವಹಿಸಬೇಕು. ಕಂಪ್ಯೂಟರ್‌ನ ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಮತ್ತು ಸೆಕ್ಯುರಿಟಿ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ಅಪರಿಚಿತ ಫೈಲ್‌ಗಳು, ಅನುಮಾನಾಸ್ಪದ ಡೌನ್‌ಲೋಡ್‌ಗಳು ಮತ್ತು ಕ್ರ್ಯಾಕ್ ಸಾಫ್ಟ್‌ವೇರ್ ಬಳಕೆಯಿಂದಲೂ ದೂರವಿರಬೇಕು ಎಂದು ಸರ್ಕಾರ ಸಲಹೆ ನೀಡಿದೆ.