ನ್ಯೂಸ್

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಗೆಲುವಿನ ಸನಿಹದಲ್ಲಿದ್ದಾರೆ ಬಿಡೆನ್​

shastrimath

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್​ ಗೆಲುವಿನ ಸನಿಹ ತಲುಪಿದ್ದಾರೆ. ಗುರುವಾರ ರಾತ್ರಿ ವೇಳೆಗೆ ಅಂತಿಮ ಗೊಂಡ ಮತಎಣಿಕೆ ಲೆಕ್ಕಾಚಾರ ಪ್ರಕಾರ, ಬಿಡೆನ್​ 538 ಎಲೆಕ್ಟೋರಲ್ ಕಾಲೇಜ್​ ಮತಗಳ ಪೈಕಿ 253ರಲ್ಲಿ ಗೆಲುವು ಕಂಡಿದ್ದಾರೆ. ಹಾಲಿ ಅಧ್ಯಕ್ಷ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್​ 213 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಬಹುಮತಕ್ಕೆ 270 ಸ್ಥಾನಗಳಲ್ಲಿ ಗೆಲುವು ಕಾಣಬೇಕು.

ಜಾರ್ಜಿಯಾದಲ್ಲಿನ 16 ಎಲೆಕ್ಟೋರಲ್ ಕಾಲೇಜ್ ಮತಗಳಲ್ಲಿ ಟ್ರಂಪ್​ಗೆ 1,902 ಮತಗಳ ಕೊರತೆಯಾದರೆ, ಪೆನ್​ಸಿಲ್ವೇನಿಯಾದಲ್ಲಿ 20 ಎಲೆಕ್ಟೋರಲ್ ಕಾಲೇಜ್​ಗಳಿದ್ದು ಅಲ್ಲಿ 42,142 ಮತಗಳ ಹಿನ್ನಡೆ ಅನುಭವಿಸಿದ್ದಾರೆ. 213 ಎಲೆಕ್ಟೋರಲ್ ಕಾಲೇಜುಗಳ ಮತಗಳೊಂದಿಗೆ ಟ್ರಂಪ್​ ಬಹುಮತ 270 ಸಾಧಿಸಲು ಬಹಳ ಕಷ್ಟವಿದೆ.

ಇದೇ ವೇಳೆ ಬಿಡೆನ್ ಸುದ್ದಿಗಾರರ ಜತೆಗೆ ಮಾತನಾಡಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಜನತೆ ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದಾರೆ. ಮತ ಎಣಿಕೆ ಪೂರ್ಣಗೊಂಡ ಬಳಿಕ ಒಟ್ಟಾರೆ ಚಿತ್ರಣ ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ಎಲ್ಲರೂ ತಾಳ್ಮೆಯಿಂದ ಇರಬೇಕಾದ್ದು ಅವಶ್ಯ ಎಂದು ಹೇಳಿದ್ದಾರೆ. (ಏಜೆನ್ಸೀಸ್)