ನ್ಯೂಸ್

6 ಸಾವಿರ ಫಿಕ್ಸ್​, ಹಣ ತಗೋಳೋದ್ರಲ್ಲಿ ನಾವು ಭೇದಭಾವ ಮಾಡಲ್ಲ: ಬಿಡದಿಯಲ್ಲಿ ವೈದ್ಯೆಯರ ಹಣದಾಹದ ವಿಡಿಯೋ ವೈರಲ್​

ರಾಮನಗರ: ಇದು ಸರ್ಕಾರಿ ಆಸ್ಪತ್ರೆ, ಆದರೂ ಇಲ್ಲಿ ಹೆರಿಗೆ ಮಾಡಿಸಬೇಕು ಅಂದ್ರೆ ಲಂಚ ಕೊಡಲೇಬೇಕು. ಅದೂ 6 ಸಾವಿರ ರೂಪಾಯಿ! ನಾವು ಬಡವರು, ಇರೋದೇ ಇಷ್ಟು ತಗೋಳಿ ಅಂದ್ರೆ ನೋ ಅಂತಾರೆ. ಲಂಚ ಪಡೆಯೋದ್ರಲ್ಲಿ ಭೇದಭಾವ ಮಾಡಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಈ ದೃಶ್ಯ ವೈರಲ್​ ಆಗಿದ್ದು, ವೈದ್ಯರ ಹಣದಾಹಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇಂತಹ ಘಟನೆ ರಾಮನಗರದ ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾರದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆರಿಗೆಗೆ ಮಹಿಳೆ ರೂಪಾ ದಾಖಲಾಗಿದ್ದರು. ಅವರ ಪತಿ ಬಳಿ ವೈದ್ಯರಾದ ಡಾ.ಶಶಿಕಲಾ ಹಾಗೂ ಡಾ. ಐಶ್ವರ್ಯ 6 ಸಾವಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಷ್ಟೊಂದು ಹಣ ಇಲ್ಲ ಮೇಡಂ, ನನ್ನ ಬಳಿ ಇರೋದೇ 2 ಸಾವಿರ ರೂಪಾಯಿ. ನಾನು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡೋದು, ಇನ್ನೂ ಸಂಬಳ ಕೂಡ ಆಗಿಲ್ಲ. ಇರೋದು 2 ಸಾವಿರ ಮಾತ್ರ, ಹೆಚ್ಚು ಕೊಡಲು ಆಗಲ್ಲ ಮೇಡಂ  ಎಂದು ರೂಪಾ ಅವರ ಪತಿ ಹೇಳಿದ್ದಾರೆ.

ಇದಕ್ಕೆ ಒಪ್ಪದ ವೈದ್ಯೆಯರು, ನೀವು ಕೊಡೋ ಹಣವನ್ನು ನಾವು ಎಲ್ಲರಿಗೂ ಹಂಚಬೇಕು. ಪ್ರತಿಯೊಬ್ಬರಿಗೂ ಎರಡು ಸಾವಿರ ರೂ. ಕೊಡಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡಲ್ಲ, 6 ಸಾವಿರ ಫಿಕ್ಸ್​. 2 ಸಾವಿರ ಅವರಿಗೆ, 2 ಸಾವಿರ ಇವರಿಗೆ, 2 ಸಾವಿರ ನನಗೆ... ಎಂದು ವೈದ್ಯೆ ಹೇಳಿದ್ದಾರೆ. ನೀವು ಕೊಡೋ 2 ಸಾವಿರದಲ್ಲಿ ಎಲ್ಲರಿಗೂ 500 ಕೊಡೋಕೆ ಆಗುತ್ತಾ? ಆಗಲ್ಲ 6 ಸಾವಿರ ಕೊಡಿ, ನಾವು ಕಮ್ಮಿ ತಗೊಂಡ್ರೆ ವಾರ್ಡ್​ನಲ್ಲಿ ಬೇರೆಯವರಿಗೆ ಗೊತ್ತಾದ್ರೆ ಎಲ್ಲರೂ ಅಷ್ಟೇ ಕೊಡ್ತಾರೆ... ಎಂದು ಹೇಳಿದ್ದಾರೆ. ಈ ಎಲ್ಲ ದೃಶ್ಯವೂ ರೋಗಿಯೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿನ ಲಂಚಾವತಾರದ ದೃಶ್ಯ ವೈರಲ್​ ಆಗಿದೆ.