ಶಿವಮೊಗ್ಗ: ಒಂದು ಜನಾಂಗ, ಒಂದು ಸಂಸ್ಕೃತಿಯ ಪ್ರತೀಕವಾಗಿರುವುದು ದಿ. ಡಾ. ಎಸ್.ಎಲ್.ಭೈರಪ್ಪನವರ ಸಾಹಿತ್ಯ. ಅವರೊಬ್ಬ ಕನ್ನಡ ಸಾಹಿತ್ಯದ ತಪಸ್ವಿ ಎಂದು ಸಾಹಿತಿ, ಅಂಕಣಕಾರ ಡಾ. ಜಿ.ಬಿ.ಹರೀಶ್ ಬಣ್ಣಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಏರ್ಪಡಿಸಿದ್ದ ಎಸ್.ಎಲ್.ಭೈರಪ್ಪ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಓದುಗರೇ ಇಲ್ಲ. ಇಂದಿನ ಪೀಳಿಗೆ ಕಂಪ್ಯೂಟರ್, ಮೊಬೈಲ್ ಆಕರ್ಷಣೆಗೆ ಒಳಗಾಗಿದೆ. ಸಾಹಿತ್ಯದತ್ತ ಮುಖ ಮಾಡುತ್ತಿಲ್ಲ ಎಂಬ ಅಳಲಿನ ನಡುವೆಯೇ ಭೈರಪ್ಪ ಅವರ ಕೃತಿಗಳನ್ನು ಜನರು ಕಾದು ಖರೀದಿಸಿದರು. ಅದು ಅವರ ಸಾಹಿತ್ಯದಲ್ಲಿನ ಸವಿಗೆ ಸಾಕ್ಷಿ ಎಂದು ಹೇಳಿದರು.
ಹಾಸನದ ರಾಜಾರಾಯರ ಸಾಹಿತ್ಯ ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಕೃಷಿ ಮೇಲೆ ಸಾಕಷ್ಟು ಪರಿಣಾಮ ಬೀರಿರುವುದು ಕಾಣುತ್ತದೆ. ಇಡೀ ಕನ್ನಡ ಸಾಹಿತ್ಯದ ಸತ್ವವನ್ನು ಭೈರಪ್ಪ ಅರ್ಥ ಮಾಡಿಕೊಂಡಿದ್ದರು. ಗದ್ಯಕ್ಕೆ ಕಾವ್ಯದ ಶೈಲಿ ನೀಡಿದ ಅಪರೂಪದ ಬರಹಗಾರ ಅವರು. ಕುಮಾರವ್ಯಾಸನ ಕಾವ್ಯದ ಲಯವನ್ನು ಅವರು ಕನ್ನಡ ಸಾಹಿತ್ಯಕ್ಕೆ ಲೇಪಿಸಿದ್ದರು ಎಂದು ಅಭಿಪ್ರಾಯಪಟ್ಟರು.
ತಾನಾಯಿತು, ತನ್ನ ಸಾಹಿತ್ಯ ರಚನೆಯಾಯಿತು ಎಂಬಂತೆ ಬದುಕಿದವರು ಭೈರಪ್ಪ. ಬೇಡದ ಸಂಗತಿಗಳ ಬಗ್ಗೆ ಅವರೆಂದೂ ಚರ್ಚೆಗಿಳಿಯಲೇ ಇಲ್ಲ. ಜನರಲ್ಲಿ ಕಾದಂಬರಿ ಓದುವ ಹುಚ್ಚು ಹತ್ತಿಸಿದವರು ಅವರು. ಅವರ ಬಹುತೇಕ ಕೃತಿಗಳು ಮರುಮುದ್ರಣ ಆಗುತ್ತಲೇ ಇವೆ. ಕೆಲವೊಮ್ಮೆ ಓದುಗರಿಗೆ ಪುಸ್ತಕ ಪೂರೈಕೆ ಮಾಡುವುದೇ ಪ್ರಕಾಶಕರಿಗೆ ಸವಾಲಾಗಿ ಪರಿಣಮಿಸಿರುವುದೂ ಉಂಟು ಎಂದು ಆವರಣ ಕೃತಿ ಹೊರಬಂದ ಸಂದರ್ಭವನ್ನು ನೆನಪಿಸಿಕೊಂಡರು.
ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.