ಅನ್ನವೇ ಇಲ್ಲದ ರೈಸ್ ಬೌಲ್!
ಬೆಂಗಳೂರು: ಸಿಲಿಕಾನ್ ಸಿಟಿ, ಬೆಂಗಳೂರಿನ ಜನ ಏನನ್ನಾದರೂ ಹೊಸದಾಗಿ ಟ್ರೈ ಮಾಡೋದ್ರಲ್ಲಿ ಯಾವತ್ತೂ ಮುಂದೆ. ಅದು ಸಾಫ್ಟ್‌ವೇರ್ ಇರಲಿ ಅಥವಾ ತಿನ್ನುವ ಖಾದ್ಯ (Food Viral) ವಿರಲಿ, ಸ್ವಲ್ಪ ಕಸ್ಟಮೈಸ್ ಮಾಡದಿದ್ರೆ ಅವರಿಗೆ ಸಮಾಧಾನ ದೊರೆಯಲ್ಲ.
ಈಗ ಅಂತಹದ್ದೇ ಒಂದು ತಮಾಷೆಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಟೆಕ್ಕಿಯೊಬ್ಬರು ಮಾಡಿದ ವಿಚಿತ್ರ ಫುಡ್ ಆರ್ಡರ್ ಸೋಷಿಯಲ್ ಮೀಡಿಯಾವನ್ನು ನಗೆಹಡಲಿನಲ್ಲಿ ತೇಲಿಸಿದೆ. ಜಹ್ಲೆ ಖಾನ್ ಎಂಬ ಬೆಂಗಳೂರಿನ ಟೆಕ್ಕಿಯೊಬ್ಬರು ಜೊಮಾಟೊ (Zomato) ಮೂಲಕ ಊಟ ಆರ್ಡರ್ ಮಾಡುವಾಗ ಮಾಡಿದ ಬುದ್ಧಿವಂತಿಕೆ ಈಗ ಎಲ್ಲೆಡೆ ವೈರಲ್ ಆಗಿದೆ.
ರೈಸ್ ಬೌಲ್‌ನಲ್ಲಿ ಅಕ್ಕಿಯೇ ಇರಲಿಲ್ಲ!
ಜಹ್ಲೆ ಖಾನ್ ಅವರು ಬೆಂಗಳೂರಿನ ಪ್ರಸಿದ್ಧ 'ಕ್ಯಾಲಿಫೋರ್ನಿಯಾ ಬುರ್ರಿಟೊ' (California Burrito) ಹೋಟೆಲ್‌ನಿಂದ ಪೆರಿ ಪೆರಿ ಪೊಟ್ಯಾಟೋ ರೈಸ್ ಬೌಲ್ ಅನ್ನು ಆರ್ಡರ್ ಮಾಡಿದ್ದರು. ನಂತರ ಅವರು ಆ ರೈಸ್ ಬೌಲ್‌ನಲ್ಲಿ ತಮಗೆ ಬೇಡದ ಪದಾರ್ಥಗಳನ್ನೆಲ್ಲಾ ಪಟ್ಟಿಯಿಂದ ಒಂದೊಂದಾಗಿ ತೆಗೆದುಹಾಕುತ್ತಾ ಹೋಗಿದ್ದಾರೆ.
ಏನೇನನ್ನೆಲ್ಲಾ ತೆಗೆದುಹಾಕಿದ್ರು?
ಸಾಮಾನ್ಯವಾಗಿ ರೈಸ್ ಬೌಲ್ ಅಂದ್ರೆ ಅದರಲ್ಲಿ ಅಕ್ಕಿ, ಬೀನ್ಸ್, ಈರುಳ್ಳಿ, ಕಾರ್ನ್, ಕ್ರೀಮ್ ಹೀಗೆ ಹತ್ತಾರು ಪದಾರ್ಥಗಳಿರುತ್ತವೆ. ಆದರೆ ಖಾನ್ ಬೀನ್ಸ್, ಕ್ಯಾಪ್ಸಿಕಂ, ಟೊಮೆಟೊ ಜೊತೆಗೆ ಅನ್ನವನ್ನು ಕ್ಯಾನ್ಸಲ್ ಮಾಡಿದ್ದಾರೆ.
ಪರಿಣಾಮವಾಗಿ, ಹೋಟೆಲ್‌ನವರು ಡೆಲಿವರಿ ಕೊಟ್ಟ ಬಟ್ಟಲಿನಲ್ಲಿ ಕೇವಲ ಹುರಿದ ಪೆರಿ ಪೆರಿ ಆಲೂಗಡ್ಡೆ ಮಾತ್ರ ಇದ್ದು, ಇದನ್ನು ಖಾನ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.
ನೆಟ್ಟಿಗರ ಫನ್ನಿ ಕಮೆಂಟ್ಸ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, ಇದು ಅನ್ನವೇ ಇಲ್ಲದ ರೈಸ್ ಬೌಲ್ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು, ಅಣ್ಣಾ ನಿನ್ನ ಪಾದದ್ ಜೆರಾಕ್ಸ್ ಕೊಡಣ್ಣಾ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದೇ ರೀತಿ ಚಿಕನ್ ರೈಸ್ ಬೌಲ್‌ನಲ್ಲಿ ಅಕ್ಕಿ ತೆಗೆದರೆ ಕೇವಲ ಚಿಕನ್ ಮಾತ್ರ ಕೊಡ್ತಾರಾ? ಎಂದು ಕೇಳಿದ್ದಾರೆ, (ಏಜನ್ಸೀಸ್).